ಸಾರಾಂಶ
ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಬದರಿನಾಥದಿಂದ 3 ಕಿ.ಮೀ. ದೂರದಲ್ಲಿರುವ ಚಮೋಲಿ ಜಿಲ್ಲೆಯ ಮಾಣಾ ಎಂಬಲ್ಲಿ ಶುಕ್ರವಾರ ಭಾರೀ ಹಿಮಕುಸಿತ ಸಂಭವಿಸಿದೆ. ಹಿಮ ತೆರವು ಕೆಲಸಕ್ಕೆ ನಿಯೋಜಿಸಲಾಗಿದ್ದ 57 ಕಾರ್ಮಿಕರು ಅದರಡಿ ಸಿಲುಕಿದ್ದು, ಅವರಲ್ಲಿ ಈಗಾಗಲೇ 32 ಮಂದಿಯನ್ನು ರಕ್ಷಿಸಲಾಗಿದೆ.
ಡೆಹರಾಡೂನ್: ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಬದರಿನಾಥದಿಂದ 3 ಕಿ.ಮೀ. ದೂರದಲ್ಲಿರುವ ಚಮೋಲಿ ಜಿಲ್ಲೆಯ ಮಾಣಾ ಎಂಬಲ್ಲಿ ಶುಕ್ರವಾರ ಭಾರೀ ಹಿಮಕುಸಿತ ಸಂಭವಿಸಿದೆ. ಹಿಮ ತೆರವು ಕೆಲಸಕ್ಕೆ ನಿಯೋಜಿಸಲಾಗಿದ್ದ 57 ಕಾರ್ಮಿಕರು ಅದರಡಿ ಸಿಲುಕಿದ್ದು, ಅವರಲ್ಲಿ ಈಗಾಗಲೇ 32 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 25 ಕಾರ್ಮಿಕರ ರಕ್ಷಣೆಗೆ ಯತ್ನ ನಡೆದಿದೆ. ಈವರೆಗೆ ಯಾವುದೇ ಸಾವು ವರದಿಯಾಗಿಲ್ಲ.
ಭಾರತ ಹಾಗೂ ಟಿಬೆಟ್ ಗಡಿಯ ಬಳಿ 3,200 ಮೀ. ಎತ್ತರದಲ್ಲಿರುವ ಮಾಣಾ ಹಾಗೂ ಬದರಿನಾಥ ನಡುವಿದ್ದ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಕ್ಯಾಂಪ್‌ಗಳ ಮೇಲೆ ಹಿಮ ಕುಸಿದಿದ್ದು, ಅದು ಹೂತುಹೋಗಿದೆ. ಕೂಡಲೇ ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂದೀಪ್ ತಿವಾರಿ ತಿಳಿಸಿದ್ದಾರೆ.ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ಟಿಬೆಟ್ ಗಡಿ ಕಡೆ ಸೇನಾ ವಾಹನ ತೆರಳಲು ಅನುಕೂಲವಾಗುವಂತೆ ಹಿಮ ತೆರವುಗೊಳಿಸುತ್ತಿದ್ದ ಕಾರ್ಮಿಕರು ಹಿಮಪಾತಕ್ಕೆ ಸಿಲುಕಿದ್ದಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತನಾಡಿದೆ. ಆಡಳಿತವು ಸಂತ್ರಸ್ತರಿಗೆ ಸಾಧ್ಯವಾದ ಎಲ್ಲಾ ನೆರವನ್ನು ನೀಡುತ್ತದೆ. ಹಿಮದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಕ್ಕೆ ಸ್ಥಳೀಯ ಸೇನಾ ತುಕಡಿಗಳೂ ಕೈಜೋಡಿಸಿವೆ. ನಿರಂತರ ಹಿಮಪಾತ ಹಾಗೂ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ನಿಧಾನ ಗತಿಯಲ್ಲಿ ನಡೆಯುತ್ತಿದೆ’ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಕ್ಷಣಾ ಕಾರ್ಯಕ್ಕೆ ಸಹಾಯದ ಭರವಸೆ ನೀಡಿದ್ದಾರೆ.
ಮಾಧ್ಯಮದೆದುರು ಮಾತನಾಡಿದ ಸಿಎಂ ಧಾಮಿ, ‘ಅನೇಕ ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಭಾರತ-ಟಿಬೆಟ್ ಗಡಿ ಪೊಲೀಸರು ಸೇರಿದಂತೆ ವಿವಿಧ ವಿಭಾಗಗಳ ನೆರವಿನೊಂದಿಗೆ ಉಳಿದವರನ್ನು ಹೊರತರಲು ಪ್ರಯತ್ನಿಸಲಾಗುತ್ತಿದೆ. ನಮ್ಮ ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಆಡಳಿತ ಎಚ್ಚರಿಕೆಯಿಂದಿದೆ. ಆದರೆ ರಕ್ಷಣೆ ಸತತ ಹಿಮಪಾತ ಅಡ್ಡಿ ಮಾಡುತ್ತಿದೆ’ ಎಂದರು.ಈಗಾಗಲೇ ಕಾರ್ಮಿಕರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 4 ತಂಡಗಳನ್ನು ಕಳಿಸಲಾಗಿದ್ದು, ಇನ್ನೂ 4 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಮೊದಲೇ ಎಚ್ಚರಿಕೆ ರವಾನೆ:ಚಂಡೀಗಢದಲ್ಲಿರುವ, ಡಿಆರ್‌ಡಿಒದ ಭಾಗವಾದ ಡಿಜಿಆರ್‌ಇ, ಮುಂದಿನ 24 ಗಂಟೆಗಳಲ್ಲಿ ಹಿಮಪಾತ ಸಂಭವಿಸುವ ಬಗ್ಗೆ ಗುರುವಾರ ಸಂಜೆ ಚಮೋಲಿ, ಉತ್ತರಕಾಶಿ, ರುದ್ರಪ್ರಯಾಗ, ಪಿಥೋರಗಢ, ಬಾಘೇಶ್ವರ್ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿತ್ತು.