ಸಾರಾಂಶ
ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬುಧವಾರ ಸಂಜೆ ಭೀಕರ ಕಾಲ್ತುಳಿತ ಸಂಭವಿಸಿದ್ದು, 6 ಭಕ್ತರು ಸಾವನ್ನಪ್ಪಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬುಧವಾರ ಸಂಜೆ ಭೀಕರ ಕಾಲ್ತುಳಿತ ಸಂಭವಿಸಿದ್ದು, 6 ಭಕ್ತರು ಸಾವನ್ನಪ್ಪಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜ.10ರಿಂದ ಆರಂಭವಾಗಲಿರುವ ವೈಕುಂಠ ದ್ವಾರ ದರ್ಶನಕ್ಕೆ ಸರ್ವದರ್ಶನ ಟಿಕೆಟ್ ಪಡೆಯಲು ಸಾವಿರಾರು ಭಕ್ತರು ಏಕಾಏಕಿ ನುಗ್ಗಿದ ಕಾರಣ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಏರುವ ಭೀತಿ ಉಂಟಾಗಿದೆ.
ಈ ಘಟನೆ ಬೆನ್ನಲ್ಲೇ ಟಿಟಿಡಿ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಭೆ ನಡೆಸಿದ್ದು ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸ್ಥಳಕ್ಕೆ ದೌಡಾಯಿಸುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ವಿಶಾಖಪಟ್ಟಣಕ್ಕೆ ಆಗಮಿಸಿದ್ದರು. ಮೋದಿ ಅವರೊಂದಿಗೆ ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ರೋಡ್‌ಶೋ ಕೂಡ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿಶಾಖಪಟ್ಟಣದಿಂದಲೇ ಅಧಿಕಾರಿಗಳ ಜೊತೆ ನಾಯ್ಡು ವರ್ಚ್ಯುವಲ್ ಆಗಿ ಸಭೆ ನಡೆಸಿದ್ದಾರೆ.
ಏನಾಯ್ತು?:
ಜ.10ರಿಂದ 19ರವರೆಗೆ ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ನಡೆಯಲಿದೆ. ಇದಕ್ಕೆ ಗುರುವಾರ ಬೆಳಗ್ಗೆ 5 ಗಂಟೆಯಿಂದ ಟಿಕೆಟ್ ವಿತರಿಸಲು ಟಿಟಿಡಿ 8 ಕಡೆ ಕೌಂಟರ್‌ಗಳನ್ನು ತೆರೆದಿತ್ತು. ಆದರೆ ಬುಧವಾರ ಮಧ್ಯಾಹ್ನದಿಂದಲೇ ಸಾವಿರಾರು ಜನರು ಈ ಟಿಕೆಟ್ ವಿತರಣೆ ಕೌಂಟರ್ ಬಳಿ ನೆರೆದಿದ್ದರು. ಈ ವೇಳೆ ಶ್ರೀನಿವಾಸಂ, ಬೈರಾಗಿಪಟ್ಟೇಡ ರಾಮಾನಾಯ್ಡು ಶಾಲೆ ಮತ್ತು ಸತ್ಯಾನಾರಾಯಣಪುರಂ ಕೌಂಟರ್‌ಗಳಿಗೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಸಾವು-ನೋವು ಸಂಭವಿಸಿದೆ.
2022ರಲ್ಲೂ ಕಾಲ್ತುಳಿತ:
2022ರ ಏಪ್ರಿಲ್‌ನಲ್ಲಿ ಸರ್ವದರ್ಶನ ಟಿಕೆಟ್ ಪಡೆಯಲು ಜನರು ನುಗ್ಗಿದ ಕಾರಣ ಕಾಲ್ತುಳಿತ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿರಲಿಲ್ಲ.