ಸೈಬರ್‌ ವಂಚನೆಯಿಂದ ಗ್ರಾಹಕರಿಗೆ ಅನಧಿಕೃತ ವಹಿವಾಟು ನಡೆದು ನಷ್ಟವಾದರೆ ಬ್ಯಾಂಕ್‌ಗಳೇ ಹೊಣೆ!

| Published : Jan 09 2025, 01:48 AM IST / Updated: Jan 09 2025, 05:21 AM IST

ಸಾರಾಂಶ

ಸೈಬರ್‌ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ಗ್ರಾಹಕರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕ್‌ಗಳೇ ಹೊಣೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.  

ನವದೆಹಲಿ: ಸೈಬರ್‌ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ಗ್ರಾಹಕರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕ್‌ಗಳೇ ಹೊಣೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ. ಇದೇ ವೇಳೆ ಗ್ರಾಹಕರು ಕೂಡಾ ಜಾಗ್ರತೆ ವಹಿಸಬೇಕು, ಒಟಿಪಿಯಂಥ ಸೂಕ್ಷ್ಮ ವಿಚಾರ ಹಂಚಿಕೊಳ್ಳುವುದು ಬಿಡಬೇಕು ಎಂದು ಸಲಹೆ ನೀಡಿದೆ.

ಏನಿದು ಪ್ರಕರಣ?:

ಅಸ್ಸಾಂ ಪಲ್ಲಬ್‌ ಭೌಮಿಕ್‌, ಆನ್‌ಲೈನ್‌ ಮೂಲಕ ವಸ್ತುವೊಂದನ್ನು ಖರೀದಿಸಿದ್ದರು. ಆದರೆ ಅದರ ಬಗ್ಗೆ ತೃಪ್ತಿಯಾಗದ ಕಾರಣ ಅದನ್ನು ಮರಳಿಸಲು ನಿರ್ಧರಿಸಿದ್ದರು. ಹೀಗೆ ಆ ವಸ್ತುವನ್ನು ಮರಳಿಸುವ ಪ್ರಕ್ರಿಯೆ ವೇಳೆ ಕಸ್ಟಮರ್‌ ಕೇರ್‌ ಹೆಸರಿನಲ್ಲಿ ಪಲ್ಲಬ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿರ್ದಿಷ್ಟ ಆ್ಯಪ್‌ ಡೌನ್‌ಲೋಡ್‌ಗೆ ಸೂಚಿಸಿದ್ದ. ಪಲ್ಲಬ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಕಸ್ಟಮರ್‌ ಕೇರ್‌ ಎಂದು ಹೇಳಿದ್ದ ವ್ಯಕ್ತಿಗೆ ಎಂಪಿನ್‌, ಒಟಿಪಿ ಎಲ್ಲವನ್ನೂ ನೀಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯಿಂದ 94204 ರು. ಹಣ ಎಗರಿಸಲಾಗಿತ್ತು.

ಈ ವಿಷಯವನ್ನು ನಿಯಮದಂತೆ 24 ಗಂಟೆಯೊಳಗೆ ಪಲ್ಲಬ್‌ ಬ್ಯಾಂಕ್‌ ಗಮನಕ್ಕೆ ತಂದಿದ್ದರು. ಆದರೆ ನೀವು ಒಟಿಪಿ, ಎಂಪಿನ್‌ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಹೀಗಾಗಿ ಇದರಲ್ಲಿ ಬ್ಯಾಂಕ್‌ನ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಬ್ಯಾಂಕ್‌ ಹೇಳಿತ್ತು.

ಈ ಬಗ್ಗೆ ಪಲ್ಲಬ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್‌ ಪಲ್ಲಬ್‌ ಪರ ತೀರ್ಪು ನೀಡಿತ್ತು. ಇದನ್ನು ಎಸ್‌ಬಿಐ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಈ ಕುರಿತು ಇದೀಗ ತೀರ್ಪು ನೀಡಿರುವ ಸುಪ್ರೀಂಕೋರ್ಟ್‌, ‘ಮೂರನೇ ವ್ಯಕ್ತಿಯಿಂದಾದ ವಂಚನೆ ಪ್ರಕರಣಕ್ಕೆ ಗ್ರಾಹಕ ಹೊಣೆಯಾಗುವುದಿಲ್ಲ ಎಂದು ಆರ್‌ಬಿಐ ನಿಯಮಗಳೇ ಹೇಳಿವೆ. ಸೈಬರ್‌ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್‌ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಮೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್‌ಬಿಐ ವಿಫಲವಾಗಿದೆ. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್‌ಬಿಐಗೆ ನ್ಯಾಯಪೀಠ ಸೂಚಿಸಿದೆ.