ಏಕ ಹಂತದಲ್ಲಿ ಚುನಾವಣೆ : ಮೊದಲ ಜಂಟಿ ಸಂಸದೀಯ ಸಮಿತಿಯ ಸಭೆಯಲ್ಲಿ ಪರ, ವಿರೋಧ ವಾದ

| Published : Jan 09 2025, 01:47 AM IST / Updated: Jan 09 2025, 05:22 AM IST

ಸಾರಾಂಶ

ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಕರಡು ಮಸೂದೆಗೆ ಚರ್ಚೆಗೆ ರಚಿಸಲಾದ ಬಿಜೆಪಿಯ ಪಿ.ಪಿ. ಚೌಧರಿ ನೇತೃತ್ವದ ಜಂಟಿ ಸಂಸದೀಯ ಸಮಿತಿಯ ಸಭೆ ಬುಧವಾರ ನಡೆಯಿತು.

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಕರಡು ಮಸೂದೆಗೆ ಚರ್ಚೆಗೆ ರಚಿಸಲಾದ ಬಿಜೆಪಿಯ ಪಿ.ಪಿ. ಚೌಧರಿ ನೇತೃತ್ವದ ಜಂಟಿ ಸಂಸದೀಯ ಸಮಿತಿಯ ಸಭೆ ಬುಧವಾರ ನಡೆಯಿತು.

ಈ ವೇಳೆ, ವಿಪಕ್ಷಗಳು ತಿದ್ದುಪಡಿಗಳನ್ನು ವಿರೋಧಿಸಿದರೆ, ಇದು ಜನರ ಅಭಿಪ್ರಾಯ ಎಂದು ಬಿಜೆಪಿ ಪ್ರತಿಪಾದಿಸಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳು ತಿದ್ದುಪಡಿಗಳ ಕುರಿತು ವಿವರಿಸಿದ್ದು, ಬಳಿಕ ಅದರ ಪರ-ವಿರೋಧ ಚರ್ಚೆಗಳು ನಡೆದವು. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ವೆಚ್ಚ ಕಡಿಮೆಯಾಗುವುದು ಎಂಬ ವಾದವನ್ನು ಪ್ರಶ್ನಿಸಿದ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ, ‘2004ರ ಲೋಕಸಭೆ ಚುನಾವಣೆಗೆ ಮೊದಲ ಬಾರಿ 543 ಸ್ಥಾನಗಳಿಗೆ ಇವಿಎಂ ಬಳಸಿ ಮತದಾನ ನಡೆಸಿದಾಗ ಅಂದಾಜಿಸಲಾದಂತೆ ಈಗಲೂ ಹೇಳುತ್ತಿದ್ದೀರಾ?’ ಎಂದು ಪ್ರಶ್ನಿಸಿದರು. ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಎತ್ತಿಹಿಡಿಯುವುದು ಹಣ ಉಳಿಸುವುದಕ್ಕಿಂತ ಮುಖ್ಯ ಎಂದು ಟಿಎಂಸಿ ಅಭಿಪ್ರಾಯಪಟ್ಟಿತು.

ಒಂದು ದೇಶ ಒಂದು ಚುನಾವಣೆಯಿಂದ ಹಲವು ರಾಜ್ಯಗಳ ವಿಧಾನಸಭೆಗಳನ್ನು ಅವಧಿಗೂ ಮುನ್ನ ವಿಸರ್ಜಿಸಬೇಕಾಗಿ ಬರುವುದರಿಂದ ಅದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧ ಎಂದು ವಿಪಕ್ಷಗಳು ಹೇಳಿದಾಗ, ಬಿಜೆಪಿ ನಾಯಕ ಜೈಸ್ವಾಲ್‌ 1957ರಲ್ಲಿ ರಾಜೇಂದ್ರ ಪ್ರಸಾದ್‌ ರಾಷ್ಟ್ರಪತಿಯಾಗಿದ್ದಾಗ 7 ರಾಜ್ಯಗಳ ವಿಧಾನಸಭೆಯನ್ನು ವಿಸರ್ಜಿಸಿದ್ದನ್ನು ನೆನಪಿಸಿ ಅದು ಸಂವಿಧಾನ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು.

ಏಕನಾಥ್‌ ಶಿಂಧೆಯವರ ಶಿವಸೇನೆ, ಒಂದಾದ ಮೇಲೊಂದು ಚುನಾವಣೆ ನಡೆಸಿದರೆ ಅಭಿವೃದ್ಧಿ ಕೆಲಸಗಳು ನಿಧಾನವಾಗುತ್ತದೆ ಎಂದು ಮಹಾರಾಷ್ಟ್ರದ ಉದಾಹರಣೆ ನೀಡಿದರು. ಏಕ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ಕಡೆಗಣಿಸಲ್ಪಡುತ್ತವೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಹೇಳಿತು.