ಸಾರಾಂಶ
ಚುನಾವಣೆಗಳಲ್ಲಿ ಅತಂತ್ರ ಸೃಷ್ಟಿಯಾದರೆ ‘ಸ್ಥಾಪಿತ ಪ್ರಜಾಪ್ರಭುತ್ವದ ಪೂರ್ವನಿದರ್ಶನ’ವನ್ನು ಅನುಸರಿಸಿ ಮತ್ತು ಅತಿದೊಡ್ಡ ಚುನಾವಣಾ ಪೂರ್ವ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನಿಸಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಏಳು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಬಹಿರಂಗ ಪತ್ರ ಬರೆದಿದ್ದಾರೆ.
ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾದರೆ ‘ಸ್ಥಾಪಿತ ಪ್ರಜಾಪ್ರಭುತ್ವದ ಪೂರ್ವನಿದರ್ಶನ’ವನ್ನು ಅನುಸರಿಸಿ ಮತ್ತು ಅತಿದೊಡ್ಡ ಚುನಾವಣಾ ಪೂರ್ವ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನಿಸಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಏಳು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಬಹಿರಂಗ ಪತ್ರ ಬರೆದಿದ್ದಾರೆ.
ಅತ್ತಂತ್ರ ಲೋಕಸಭೆ ಸೃಷ್ಟಿಯಾದರೆ ಪಕ್ಷಗಳು ಕುದುರೆ ವ್ಯಾಪಾರ ಸಾಧ್ಯತೆ ಇದೆ. ಹೀಗಾಗಿ ಇದನ್ನ ತಡೆಯಲು ರಾಷ್ಟ್ರಪತಿಗಳು ದೊಡ್ಡ ರಾಜಕೀಯ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು. ಸುಗಮ ಅಧಿಕಾರದ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಂವಿಧಾನವನ್ನು ಎತ್ತಿಹಿಡಿಯಬೇಕು ಎಂದು ನಿವೃತ್ತ ನ್ಯಾಯಮೂರ್ತಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಕೂಡ ಒತ್ತಾಯಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ಆರು ಮಾಜಿ ನ್ಯಾಯಾಧೀಶರಾದ ಜಿಎಂ ಅಕ್ಬರ್ ಅಲಿ, ಅರುಣಾ ಜಗದೀಶನ್, ಡಿ ಹರಿಪರಂತಮನ್, ಪಿ.ಆರ್. ಶಿವಕುಮಾರ್, ಸಿಟಿ ಸೆಲ್ವಂ, ಎಸ್ ವಿಮಲಾ ಮತ್ತು ಪಟನಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್ ಅವರು ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪ್ರಸ್ತುತ ಸರ್ಕಾರ ಜನಾದೇಶವನ್ನು ಕಳೆದುಕೊಂಡರೆ, ಅಧಿಕಾರ ಹಸ್ತಾಂತರ ಸುಗಮವಾಗಿರುವುದಿಲ್ಲ ಮತ್ತು ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು ಎಂಬ ಕಳವಳ ನಮಗಿದೆ ಎಂದಿದ್ದಾರೆ.