ಲೋಕಸಭಾ ಚುನಾವಣಾ ಸಮರಕ್ಕೆ ಮುಹೂರ್ತ

| Published : Mar 17 2024, 01:47 AM IST / Updated: Mar 17 2024, 08:04 AM IST

ಸಾರಾಂಶ

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ಭಾರೀ ಹಣಾಹಣಿ ನಿರೀಕ್ಷೆ ಇರುವ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸಿದೆ.

ಪಿಟಿಐ ನವದೆಹಲಿ

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ಭಾರೀ ಹಣಾಹಣಿ ನಿರೀಕ್ಷೆ ಇರುವ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸಿದೆ. 

2024ರ ಲೋಕಸಭಾ ಚುನಾವಣೆಯನ್ನು ಒಟ್ಟು 7 ಹಂತದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಏ.19ರಂದು ಮೊದಲ ಹಂತ ಮತದಾನ ಮತ್ತು ಜೂ.1ರಂದು ಕಡೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಎಲ್ಲೆಡೆ ಏಕಕಾಲಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆಯ ಜೊತೆಜೊತೆಗೇ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ವಿಧಾನಸಭೆಗೂ ಚುನಾವಣೆ ನಡೆಸಲಾಗುವುದು. 

ಇದಲ್ಲದೆ ಕರ್ನಾಟಕದ ಸುರಪುರ ಸೇರಿದಂತೆ ವಿವಿಧ ರಾಜ್ಯಗಳ 26 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಇದೇ ಸಮಯದಲ್ಲಿ ನಡೆಯಲಿದೆ. ಈ ಎಲ್ಲಾ ಚುನಾವಣೆಗಳ ಫಲಿತಾಂಶವೂ ಜೂನ್‌ 4ರಂದೇ ಪ್ರಕಟವಾಗಲಿದೆ. 

ಈ ಘೋಷಣೆಯೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ, ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದಂತಾಗಲಿದೆ. 

ಚುನಾವಣಾ ದಿನಾಂಕ ಘೋಷಣೆಯೊಂದಿಗೆ ದೇಶವ್ಯಾಪಿ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿದೆ.ಶನಿವಾರ ಮಧ್ಯಾಹ್ನ ಇಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಚುನಾವಣಾ ಆಯಕ್ತರಾದ ಸುಖ್‌ಬೀರ್‌ ಸಿಂಗ್ ಸಂಧು ಮತ್ತು ಜ್ಞಾನೇಶ್‌ ಕುಮಾರ್‌ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದರು.

7 ಹಂತದಲ್ಲಿ ಚುನಾವಣೆ: 2019ರಂತೆ ಈ ಬಾರಿಯೂ 7 ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಏ.19, ಏ,26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್‌ 1ರಂದು ಮತದಾನ ನಡೆಯಲಿದೆ. 

ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹಬ್ಬ ಹರಿದಿನಗಳು, ಭದ್ರತೆ, ವಿದ್ಯಾರ್ಥಿಗಳ ಪರೀಕ್ಷೆ - ಹೀಗೆ ವಿವಿಧ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು 7 ಹಂತಗಳಾಗಿ ವಿಂಗಡಿಸಲಾಗಿದೆ ಎಂದು ಆಯೋಗ ಹೇಳಿದೆ.

97 ಕೋಟಿ ಮತದಾರರು: ಈ ಬಾರಿಯ ಚುನಾವಣೆಯಲ್ಲಿ 97 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಈ ಪೈಕಿ 49.72 ಕೋಟಿ ಪುರುಷ ಮತ್ತು 47.1 ಕೋಟಿ ಮಹಿಳಾ ಮತದಾರರು. ಇ

ದರಲ್ಲಿ 1. ಮತದಾನ ಪ್ರಕ್ರಿಯೆಗಾಗಿ 10.5 ಲಕ್ಷ ಮತಗಟ್ಟೆ ಸ್ಥಾಪಿಸಲಾಗುವುದು. ಮತದಾನಕ್ಕಾಗಿ 55 ಲಕ್ಷ ಇವಿಎಂಗಳನ್ನು ಬಳಸಲಾಗುವುದು. ಇಡೀ ಚುನಾವಣಾ ಪ್ರಕ್ರಿಯೆಗಾಗಿ 1.5 ಕೋಟಿ ಸಿಬ್ಬಂದಿಗಳ ಸೇವೆ ಬಳಸಿಕೊಳ್ಳಲಾಗುವುದು.

4 ರಾಜ್ಯಗಳ ವಿಧಾನಸಭಾ ಚುನಾವಣೆ: ಅರುಣಾಚಲಪ್ರದೇಶ, ಸಿಕ್ಕಿ ವಿಧಾನಸಭೆಗೆ ಏ.19ರಂದು ಒಂದೇ ಹಂತದಲ್ಲಿ, ಆಂಧ್ರಪ್ರದೇಶ ವಿಧಾನಸಭೆಗೆ ಮೇ 13ರಂದು ಒಂದೇ ಹಂತದಲ್ಲಿ ಮತ್ತು ಒಡಿಶಾ ವಿಧಾನಸಭೆಗೆ ಮೇ 13, ಮೇ 20, ಮೇ 25 ಮತ್ತು ಜೂನ್‌ 1ರಂದು ಹೀಗೆ 4 ಹಂತದಲ್ಲಿ ಮತದಾನ ನಡೆಯಲಿದೆ.

ಳೆದ ಚುನಾವಣೆಯಲ್ಲಿ ಏನಾಗಿತ್ತು?
2019ರ ಲೋಕಸಭೆ ಚುನಾವಣೆಯಲ್ಲಿ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. 90 ಕೋಟಿ ಮತಗಳ ಪೈಕಿ 61.5 ಕೋಟಿ ಮತಗಳ ಚಲಾವಣೆಯಾಗಿತ್ತು. ಮತದಾನದ ಪ್ರಮಾಣ ಶೇ.67.4ರಷ್ಟಿತ್ತು.

ಬಿಜೆಪಿ 303, ಕಾಂಗ್ರೆಸ್ 52, ತೃಣಮೂಲ ಕಾಂಗ್ರೆಸ್ 22, ಬಿಎಸ್‌ಪಿ 10, ಎನ್‌ಸಿಪಿ 5, ಸಿಪಿಐ-ಎಂ 3 ಮತ್ತು ಸಿಪಿಐ 2 ಸ್ಥಾನದಲ್ಲಿ ಗೆದ್ದಿದ್ದವು.