ಗಣರಾಜ್ಯೋತ್ಸವದಲ್ಲಿ ನಾರಿ ಶಕ್ತಿ, ಸೇನಾ ಶಕ್ತಿ ಪ್ರದರ್ಶನ

| Published : Jan 27 2024, 01:15 AM IST / Updated: Jan 28 2024, 07:16 AM IST

Republic day
ಗಣರಾಜ್ಯೋತ್ಸವದಲ್ಲಿ ನಾರಿ ಶಕ್ತಿ, ಸೇನಾ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವು ಶುಕ್ರವಾರ ತನ್ನ 75ನೇ ಗಣರಾಜ್ಯೋತ್ಸವವನ್ನು ಸೇನಾ ಶಕ್ತಿ ಹಾಗೂ ನಾರಿ ಶಕ್ತಿ ಪ್ರದರ್ಶನದೊಂದಿಗೆ ವಿಶಿಷ್ಟವಾಗಿ ಆಚರಿಸಿತು. ಸೇನೆಯ ಅನೇಕ ಪಡೆಗಳು ಹಾಗೂ ಪಥಸಂಚಲನದ ವಿವಿಧ ತಂಡಗಳನ್ನು ಇದೇ ಮೊದಲ ಬಾರಿ ಮಹಿಳೆಯರೇ ಮುನ್ನಡೆಸಿದ್ದು ವಿಶೇಷವಾಗಿತ್ತು.

ಪಿಟಿಐ ನವದೆಹಲಿ

ಭಾರತವು ಶುಕ್ರವಾರ ತನ್ನ 75ನೇ ಗಣರಾಜ್ಯೋತ್ಸವವನ್ನು ಸೇನಾ ಶಕ್ತಿ ಹಾಗೂ ನಾರಿ ಶಕ್ತಿ ಪ್ರದರ್ಶನದೊಂದಿಗೆ ವಿಶಿಷ್ಟವಾಗಿ ಆಚರಿಸಿತು. ಸೇನೆಯ ಅನೇಕ ಪಡೆಗಳು ಹಾಗೂ ಪಥಸಂಚಲನದ ವಿವಿಧ ತಂಡಗಳನ್ನು ಇದೇ ಮೊದಲ ಬಾರಿ ಮಹಿಳೆಯರೇ ಮುನ್ನಡೆಸಿದ್ದು ವಿಶೇಷವಾಗಿತ್ತು. 

ಮುಖ್ಯ ಅತಿಥಿಯಾಗಿದ್ದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಅವರ ಎದುರು ನಡೆದ ಭಾರತದ ಕ್ಷಿಪಣಿಗಳು, ಯುದ್ಧವಿಮಾನಗಳು, ವಿವಿಧ ಸೇನಾಪಡೆಗಳು, ಮಹಿಳಾ ಸೇನಾ ತಂಡಗಳು, ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯಗಳ ಭವ್ಯ ಪ್ರದರ್ಶನಗಳು- ಜನಮನ ಸೂರೆಗೊಂಡವು.

ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ವಿವಿಧ ಕೇಂದ್ರ ಸಚಿವರು, ಗಣ್ಯರು ಭಾಗವಹಿಸಿ ದೇಶದ ವೈವಿಧ್ಯತೆಯನ್ನು ವೀಕ್ಷಿಸಿದರು. 

ದಟ್ಟವಾದ ಮಂಜು ಕೂಡ ಪ್ರೇಕ್ಷಕರ ಉತ್ಸಾಹವನ್ನು ಕುಗ್ಗಿಸಲು ವಿಫಲವಾಯಿತು. ಎಲ್ಲ ಕಡೆ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮೊಳಗಿದವು.ನಾರಿ ಶಕ್ತಿ ಪ್ರದರ್ಶನ:ಈ ಸಲದ ಗಣರಾಜ್ಯೋತ್ಸವದ ಧ್ಯೇಯವು ‘ನಾರಿ ಶಕ್ತಿ’ಯಾಗಿತ್ತು. 

ಅಂದರೆ ಭಾರತದಲ್ಲಿ ಮಹಿಳೆಯರು ಸೇನಾ ರಂಗ ಹಾಗೂ ವಿವಿಧ ರಂಗಗಳಲ್ಲಿ ಹೇಗೆ ಮುಂಚೂಣಿಗೆ ಬಂದಿವೆ ಎಂಬುದನ್ನು ಪ್ರದರ್ಶಿಸುವ ಉದ್ದೇಶ ಇದರ ಹಿಂದಿತ್ತು.

ಮೊದಲಿಗೆ ಮೆರವಣಿಗೆಯನ್ನು 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್‌ಗಳ ಬದಲಿಗೆ ಭಾರತೀಯ ಸಂಗೀತ ವಾದ್ಯಗಳಾದ ಶಂಖ, ನಾದಸ್ವರಂ ಮತ್ತು ನಗಾಡಾ ನುಡಿಸುತ್ತ ಸಾಗಿದರು.

ಇದೇ ಮೊದಲ ಬಾರಿಗೆ, ಸಂಪೂರ್ಣ ಮಹಿಳಾ ಯೋಧರೇ ತುಂಬಿದ್ದ ಮಹಿಳಾ ತ್ರಿ-ಸೇವಾ ದಳವು ದೇಶದ ಬೆಳೆಯುತ್ತಿರುವ ‘ನಾರಿ ಶಕ್ತಿ’ಯನ್ನು (ಮಹಿಳಾ ಶಕ್ತಿ) ಪ್ರತಿಬಿಂಬಿಸಿ ಕಾರ್ತವ್ಯ ಪಥದಲ್ಲಿ ಸಾಗಿತು. 

ಸೇನಾ ಮಿಲಿಟರಿ ಪೊಲೀಸ್‌ನ ಕ್ಯಾ। ಸಂಧ್ಯಾ ನೇತೃತ್ವದಲ್ಲಿ ನಡೆದ ಸೇನಾ ಪಡೆಯ ಮೂರೂ ದಳಗಳ ಪಥಸಂಚಲನದಲ್ಲಿ ಸೂಪರ್‌ನ್ಯೂಮರರಿ ಅಧಿಕಾರಿಗಳಾದ ಕ್ಯಾಪ್ಟನ್ ಶರಣ್ಯ ರಾವ್, ಸಬ್ ಲೆಫ್ಟಿನೆಂಟ್ ಅಂಶು ಯಾದವ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಸೃಷ್ಟಿ ರಾವ್ ಅವರ ನೇತೃತ್ವದಲ್ಲಿ ಎಲ್ಲಾ ಮಹಿಳಾ ತ್ರಿ-ಸೇನಾ ತುಕಡಿ ಭಾರಿ ಚಪ್ಪಾಳೆ ಗಿಟ್ಟಿಸಿತು.

ಆರ್ಮಿ ಡೆಂಟಲ್ ಕೋರ್‌ನ ಕ್ಯಾಪ್ಟನ್ ಅಂಬಾ ಸಾಮಂತ್, ಭಾರತೀಯ ನೌಕಾಪಡೆಯ ಸರ್ಜನ್ ಲೆಫ್ಟಿನೆಂಟ್ ಕಾಂಚನಾ ಮತ್ತು ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ದಿವ್ಯ ಪ್ರಿಯಾ ಅವರೊಂದಿಗೆ ಮೇಜರ್ ಸೃಷ್ಟಿ ಖುಲ್ಲರ್ ನೇತೃತ್ವದ ಮತ್ತೊಂದು ಸರ್ವ ಮಹಿಳಾ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ತುಕಡಿ ಕೂಡ ಪಥಸಂಚಲನ ನಡೆಸಿ ಗಮನ ಸೆಳೆಯಿತು.

ಯುದ್ಧವಿಮಾನಗಳ ಪ್ರದರ್ಶನ ವೇಳೆ 15 ಮಹಿಳಾ ಪೈಲಟ್‌ಗಳು ವಿಮಾನಗಳನ್ನು ಚಲಾಯಿಸಿ ಮಹಿಳಾ ಶಕ್ತಿ ಪ್ರದರ್ಶಿಸಿದರು. ಎನ್‌ಸಿಸಿಗೂ ಮಹಿಳೆಯರೇ ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು.

ಟ್ಯಾಬ್ಲೋ ಪ್ರದರ್ಶನದಲ್ಲೂ ನಾರಿ ಶಕ್ತಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 16 ಟ್ಯಾಬ್ಲೋ ಮತ್ತು ಕೇಂದ್ರ ಸಚಿವಾಲಯ/ಇಲಾಖೆಗಳಿಂದ 9 ಟ್ಯಾಬ್ಲೋಗಳು ಕರ್ತವ್ಯಪಥದಲ್ಲಿ ಸಾಗಿದವು. 

ಟ್ಯಾಬ್ಲೋಗಳಲ್ಲಿ ಅನೇಕ ರಾಜ್ಯಗಳು ‘ನಾರಿ ಶಕ್ತಿ’ ಪರಿಕಲ್ಪನೆ ಹೊಂದಿದ್ದು ವಿಶೇಷ.ಸೇನಾ ಕವಾಯತು:ಸೇನೆಯ ಕವಾಯತು ತಂಡಗಳಲ್ಲಿ ಮದ್ರಾಸ್ ರೆಜಿಮೆಂಟ್, ಗ್ರೆನೇಡಿಯರ್ಸ್, ರಜಪೂಯಾನಾ ರೈಫಲ್ಸ್, ಸಿಖ್ ರೆಜಿಮೆಂಟ್ ಮತ್ತು ಕುಮಾವುನ್ ರೆಜಿಮೆಂಟ್ ಇದ್ದವು. 

ಭಾರತೀಯ ನೌಕಾಪಡೆಯ ತುಕಡಿಯು 144 ಪುರುಷರು ಮತ್ತು ಮಹಿಳಾ ಅಗ್ನಿವೀರರನ್ನು ಒಳಗೊಂಡಿತ್ತು, ಲೆಫ್ಟಿನೆಂಟ್ ಪ್ರಜ್ವಲ್ ಎಂ. ಅವರು ಕಮಾಂಡರ್ ಆಗಿ ಮತ್ತು ಲೆಫ್ಟಿನೆಂಟ್ ಮುದಿತಾ ಗೋಯಲ್, ಲೆಫ್ಟಿನೆಂಟ್ ಶರ್ವಾಣಿ ಸುಪ್ರೀಯಾ ಮತ್ತು ಲೆಫ್ಟಿನೆಂಟ್ ಎಚ್‌.ದೇವಿಕಾ ಪ್ಲಟೂನ್ ಕಮಾಂಡರ್‌ಗಳಾಗಿ ನೇತೃತ್ವ ವಹಿಸಿದ್ದರು.

ಅದರ ನಂತರ ನೌಕಾದಳದ ಸ್ತಬ್ಧಚಿತ್ರವು ‘ನಾರಿ ಶಕ್ತಿ’ ಮತ್ತು ‘ಸ್ವದೇಶೀಕರಣದ ಮೂಲಕ ಸಮುದ್ರ ಶಕ್ತಿ’ ವಿಷಯಗಳನ್ನು ಚಿತ್ರಿಸುತ್ತದೆ.ಇದರ ನಡುವೆ ವಿವಿಧ ಸೇನಾ ತುಕಡಿಗಳು ಸಾಗಿದವು. 

ಹೆಲಿಕಾಪ್ಟರ್‌ಗಳಿಂದ ಫ್ಲೈ ಪಾಸ್ಟ್‌ ನಡೆಯಿತು. ಟಿ-90 ಭೀಷ್ಮ ಟ್ಯಾಂಕ್‌ಗಳು, ಎನ್‌ಎಜಿ ಕ್ಷಿಪಣಿ ವ್ಯವಸ್ಥೆಗಳು, ಪದಾತಿ ದಳದ ಯುದ್ಧ ವಾಹನಗಳು, ಎಲ್ಲಾ ಭೂಪ್ರದೇಶದ ವಾಹನಗಳು, ಶಸ್ತ್ರಾಸ್ತ್ರ ಪತ್ತೆ ರಾಡಾರ್ ವ್ಯವಸ್ಥೆ ‘ಸ್ವಾತಿ’, ಡ್ರೋನ್ ಜಾಮರ್ ವ್ಯವಸ್ಥೆಗಳು- ಪ್ರಮುಖ ಪ್ರದರ್ಶನಗಳಲ್ಲಿ ಸೇರಿವೆ.

ಅಸ್ತ್ರ, ಲಘು ಯುದ್ಧ ವಿಮಾನ ‘ತೇಜಸ್’, ಸುಧಾರಿತ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು ಮತ್ತು ಶಕ್ತಿ ಸೈಬರ್ ಭದ್ರತಾ ವ್ಯವಸ್ಥೆಗಳನ್ನು ಸಹ ಪ್ರದರ್ಶಿಸಲಾಯಿತು.

ಗಮನ ಸೆಳೆದ ರಫೇಲ್‌:ಫ್ರಾನ್ಸ್‌ನಿಂದ ಭಾರತ ಖರೀದಿಸಿರುವ ರಫೇಲ್‌ ಯುದ್ಧವಿಮಾನಗಳ ಮೈನವಿರೇಳಿಸುವ ಪ್ರದರ್ಶನವು ಮುಖ್ಯ ಅತಿಥಿ ಎಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಅವರ ಸಮ್ಮುಖದಲ್ಲಿ ನಡೆದವು. 

2 ರಫೇಲ್ ಯುದ್ಧವಿಮಾನಗಳು ಮತ್ತು ಫ್ರೆಂಚ್ ವಾಯುಪಡೆಯ ಏರ್‌ಬಸ್ ಎ330 ಟ್ಯಾಂಕರ್ ಸಾರಿಗೆ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡವು. ವಾಯುಪಡೆಯ 29 ಯುದ್ಧವಿಮಾನಗಳು, 7 ಸಾರಿಗೆ ವಿಮಾನಗಳು, 9 ಹೆಲಿಕಾಪ್ಟರ್‌ಗಳು ಮತ್ತು 1 ಹೆರಿಟೇಜ್ ವಿಮಾನವು ವಾಯುಪಡೆಯ ಪ್ರದರ್ಶನದಲ್ಲಿ ಪಾಲ್ಗೊಂಡವು.

ಈ ಎಲ್ಲಾ ವಿಮಾನಗಳು 6 ವಿಭಿನ್ನ ನೆಲೆಗಳಿಂದ ಕಾರ್ಯನಿರ್ವಹಿಸಿದವು.ಇದೇ ಮೊದಲ ಬಾರಿ 4 ತೇಜಸ್‌:ಮೊದಲ ಬಾರಿಗೆ, ಸ್ಥಳೀಯವಾಗಿ ನಿರ್ಮಿತ ತೇಜಸ್ ವಿಮಾನವು ನಾಲ್ಕು ವಿಮಾನಗಳ ರಚನೆಯಲ್ಲಿ ಹಾರಾಟ ನಡೆಸಿತು. 

ಈ ಹಿಂದೆ ಒಂದು ತೇಜಸ್ ಜೆಟ್ ಗಣರಾಜ್ಯೋತ್ಸವದ ಪರೇಡ್‌ನ ಭಾಗವಾಗಿತ್ತು. ಆದರೆ ವಿಮಾನವು 4 ವಿಮಾನ ರಚನೆಯಲ್ಲಿ ಹಾರಾಟ ನಡೆಸಿದ್ದು ಇದೇ ಮೊದಲು.

ಕೇಂದ್ರ ಸರ್ಕಾರದ ಯೋಜನೆಗಳು: ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮಗಳಾದ ‘ವಿಕಸಿತ ಭಾರತ’ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ ‘ಭಾರತ್‌ ಲೋಕತಂತ್ರ ಕೀ ಮಾತೃಕಾ’ (ಭಾರತ ಲೋಕತಂತ್ರದ ತಾಯಿ) ಸೇರಿದಂತೆ ಹಲವು ವಿಷಯಗಳನ್ನು ಆಧರಿಸಿ ಕವಾಯತುಗಳು ನಡೆದವು.

ಮಿಂಚಿದ ಕನ್ನಡಿಗರು: ಗಣರಾಜ್ಯೋತ್ಸವದಲ್ಲಿ ಮೊದಲ ಸಲ 3 ಸಂಪೂರ್ಣ ಸೇನಾ ಮಹಿಳಾ ಪಡೆಗಳ ಪಥಸಂಚಲನ ನಡೆಯಿತು. ಪಾಶ್ಚಾತ್ಯ ವಾದ್ಯ ಬದಿಗಿಟ್ಟು ಭಾರತೀಯ ವಾದ್ಯದೊಂದಿಗೆ ಮಹಿಳಾ ಕಲಾವಿದರ ಉದ್ಘಾಟನಾ ಪರೇಡ್‌ ನಡೆಯಿತು.

ಯುದ್ಧವಿಮಾನಗಳನ್ನೂ ಚಲಾಯಿಸಿ ಸೈ ಎನ್ನಿಸಿಕೊಂಡ 15 ಮಹಿಳಾ ಪೈಲಟ್‌ಗಳು ಗಮನ ಸೆಳೆದರು. ಕೇಂದ್ರ, ರಾಜ್ಯಗಳ ಸ್ತಬ್ಧಚಿತ್ರಗಳಲ್ಲೂ ಗಮನ ಸೆಳೆದ ನಾರಿ ಶಕ್ತಿ ಮಹಿಳಾ ಸಬಲೀಕರಣದ ದ್ಯೋತಕ ಎನಿಸಿಕೊಂಡರು.

ಮೈನವಿರೇಳಿಸಿದ ರಫೇಲ್, ತೇಜಸ್‌, ವಿವಿಧ ಯುದ್ಧವಿಮಾನ, ಹೆಲಿಕಾಪ್ಟರ್‌ ಪ್ರದರ್ಶನ ನಡೆಯಿತು. ಪ್ರದರ್ಶನಕ್ಕೆ ತಲೆದೂಗಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌, ಮುರ್ಮು, ಮೋದಿ, ಗಣ್ಯರು ಮುಚ್ಚುಗೆ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕನ್ನಡಿಗರು ಮಿಂಚಿದರು. ಮೂರೂ ಸೇನಾ ಪಡೆಗಳ ಮಹಿಳಾಮಯ ಪಥಸಂಚಲನದಲ್ಲಿ ಕೊಡಗು ಮೂಲದವರಾದ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಆಳ್ವಾಸ್‌ ಕಾಲೇಜು ಮಾಜಿ ವಿದ್ಯಾರ್ಥಿನಿ ಕ್ಯಾ। ಶರಣ್ಯ ರಾವ್ ಪಾಲ್ಗೊಂಡಿದ್ದರು. 

ಇನ್ನು ಮೈಸೂರು ಮೂಲದ ಕ್ಯಾಪ್ಟನ್‌ ಸುಪ್ರೀತಾ ಹಾಗೂ ಅವರ ಪತಿ ಜೆರ್ರಿ ಬ್ಲೇಜ್‌ ಅವರೂ ಸೇನೆಯ ವಿವಿಧ ಪಡೆಗಳ ಪಥಸಂಚಲನದಲ್ಲಿ ಪಾಲ್ಗೊಂಡರು. ಇದರಿಂದಾಗಿ ಇದೇ ಮೊದಲ ಬಾರಿ ಪತಿ-ಪತ್ನಿ ಪಥಸಂಚಲನದಲ್ಲಿ ಭಾಗಿಯಾದಂತಾಯಿತು.