ಇಂದು ಭಾರತದ 78ನೇ ಸ್ವಾತಂತ್ರ್ಯ ದಿನ ಸಂಭ್ರಮ : 11ನೇ ಸಲ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ

| Published : Aug 15 2024, 01:50 AM IST / Updated: Aug 15 2024, 04:16 AM IST

ಸಾರಾಂಶ

ಭಾರತವು ತನ್ನ 78ನೇ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15ರ ಗುರುವಾರ ಆಚರಿಸಲಿದೆ. ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರಧ್ವಜಾರೋಹಣ ಮಾಡಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನವದೆಹಲಿ: ಭಾರತವು ತನ್ನ 78ನೇ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15ರ ಗುರುವಾರ ಆಚರಿಸಲಿದೆ. ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರಧ್ವಜಾರೋಹಣ ಮಾಡಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಇದು ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಸತತ 11ನೇ ಭಾಷಣವಾಗಿದೆ ಮತ್ತು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ ನಂತರ ಅವರ ಮೊದಲ ಭಾಷಣವಾಗಿದೆ.

ಈ ಮೂಲಕ ಅವರು ಸತತ 10 ಸಲ ಧ್ವಜಾರೋಹಣ ಮಾಡಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ದಾಖಲೆ ಮುರಿಯಲಿದ್ದಾರೆ. ಅಲ್ಲದೆ, ಕ್ರಮವಾಗಿ 17 ಹಾಗೂ 16 ಸಲ ಧ್ವಜವಂದನೆ ಮಾಡಿದ್ದ ಪಂ. ಜವಾಹರಲಾಲ್ ನೆಹರು ಮತ್ತು ಅವರ ಪುತ್ರಿ ಇಂದಿರಾ ಗಾಂಧಿಯವರ ನಂತರ, ಅತಿ ಹೆಚ್ಚು ಬಾರಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿದ 3ನೇ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ.

ಅವರು ಬೆಳಿಗ್ಗೆ 7.30 ರ ಸುಮಾರಿಗೆ ತಮ್ಮ ಭಾಷಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ವಿಕಸಿತ ಭಾರತ ಥೀಮ್‌:

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಥೀಮ್ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಆಗಿದೆ. ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದು 2047ಕ್ಕೆ 100 ವರ್ಷ ಆಗಲಿದ್ದು, ಈ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಉದ್ದೇಶ ಸರ್ಕಾರಕ್ಕಿದೆ. ಇದು ಈ ವರ್ಷದ ಸ್ವಾಂತ್ರ್ಯೋತ್ಸವದ ಥೀಮ್‌ ಆಗಿದೆ.

ಹೀಗಾಗಿ ಮೋದಿ ಅವರು, ಮುಂದಿನ 5 ವರ್ಷದ ಸರ್ಕಾರದ ಯೋಜನೆಗಳು ಹಾಗೂ 2047ರ ಒಳಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುವ ಪರಿಕಲ್ಪನೆಯನ್ನು ಬಿಚ್ಚಿಡುವ ನಿರೀಕ್ಷೆ ಇದೆ.

ಭಾರಿ ಬಿಗಿ ಭದ್ರತೆ:

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದಿಲ್ಲಿ ಸೇರಿ ದೇಶಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ದಿಲ್ಲಿಯಲ್ಲಿ 10 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 700 ಕೃತಕ ಬುದ್ಧಿಮತ್ತೆ ಕ್ಯಾಮರಾ ಹಾಕಲಾಗಿದೆ. ಅಲ್ಲದೆ, 3000 ಟ್ರಾಫಿಕ್‌ ಪೊಲೀಸರು ಸಂಚಾರ ನಿಯಂತ್ರಿಸಲಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡಗಳು ಸ್ನಿಫರ್ ಡಾಗ್‌ಗಳನ್ನು ಬಳಸಿಕೊಂಡು ಸುತ್ತಮುತ್ತಲ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿವೆ.ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳಲ್ಲಿ (ಡಿಎಫ್‌ಎಮ್‌ಡಿ) ವಿಶೇಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಅವು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರನ್ನು ಮೇಲ್ವಿಚಾರಣೆ ಮಾಡಲು ಮುಖ ಗುರುತಿಸುವಿಕೆ ವ್ಯವಸ್ಥೆಗೆ ಸಂಪರ್ಕ ಹೊಂದಿವೆ.

ದಿನಾಚರಣೆ ಕಾರಣ ದಿಲ್ಲಿಯಲ್ಲಿ ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದ್ದು, ಯಾವುದೇ ಡ್ರೋನ್‌, ಹೆಲಿಕಾಪ್ಟರ್, ವಿಮಾನ, ಬಲೂನು ಹಾರಾಟ ನಿಷೇಧಿಸಲಾಗಿದೆ. ಅಲ್ಲದೆ, ದಿನಾಚರಣೆ ವೇಳೆ ಕೆಂಪುಕೋಟೆ, ಸಂಸತ್ತು ಹಾಗೂ ಸುತ್ತಮುತ್ತ ರಸ್ತೆ ಸಂಚಾರಕ್ಕೆ ನಿರ್ಬಂಧ ಇರಲಿದೆ.