ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲ್‌ ಅಟ್ಟಹಾಸ : ನೆಲಬಾಂಬ್‌ ಬಳಸಿ ಸ್ಫೋಟಿಸಿ 9 ಬಲಿ

| Published : Jan 07 2025, 12:16 AM IST / Updated: Jan 07 2025, 04:47 AM IST

ಸಾರಾಂಶ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಭದ್ರತಾ ಸಿಬ್ಬಂದಿಗಳು ಹೋಗುತ್ತಿದ್ದ ವಾಹನವನ್ನು 70 ಕೇಜಿ ತೂಕದ ಸುಧಾರಿತ ಸ್ಫೋಟಕಗಳಿದ್ದ ನೆಲಬಾಂಬ್‌ ಬಳಸಿ ಸ್ಫೋಟಿಸಿದ್ದಾರೆ

  ಬಿಜಾಪುರ (ಛತ್ತೀಸಗಢ) : ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಭದ್ರತಾ ಸಿಬ್ಬಂದಿಗಳು ಹೋಗುತ್ತಿದ್ದ ವಾಹನವನ್ನು 70 ಕೇಜಿ ತೂಕದ ಸುಧಾರಿತ ಸ್ಫೋಟಕಗಳಿದ್ದ ನೆಲಬಾಂಬ್‌ ಬಳಸಿ ಸ್ಫೋಟಿಸಿದ್ದಾರೆ. 

ಘಟನೆಯಲ್ಲಿ 8 ಮಂದಿ ಜಿಲ್ಲಾ ರಿಸರ್ವ್‌ ಗಾರ್ಡ್‌ನ ಸಿಬ್ಬಂದಿ ಮತ್ತು ಒಬ್ಬ ಚಾಲಕ ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ.ಇಲ್ಲಿನ ಕುಟ್ರು ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಘಟನೆ ನಡೆದಿದೆ. ಜಿಲ್ಲಾ ರಿಸರ್ವ್‌ ಗಾರ್ಡ್‌ನ ಸಿಬ್ಬಂದಿ ದಂತೇವಾಡ, ನಾರಾಯಣ್‌ಪುರ ಮತ್ತು ಬಿಜಾಪುರ ಪ್ರದೇಶದಲ್ಲಿ ನಕ್ಸಲೀಯರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿ ಸ್ಕಾರ್ಪಿಯೋ ವಾಹನದಲ್ಲಿ ಹಿಂತಿರುಗುತ್ತಿದ್ದರು. ಆಗ ಈ ಘಟನೆ ನಡೆದಿದೆ. ಭಾನುವಾರವಷ್ಟೇ ಬಸ್ತರ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯು ನಾಲ್ವರು ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದರು. ಅದರ ಬೆನ್ನಲ್ಲೇ ಮಾವೋವಾದಿಗಳು ಭೀಕರ ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿ ಖಂಡನೆ, ಶಾ ಗುಡುಗು: ನಕ್ಸಲರ ಕೃತ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ನಕ್ಸಲರ ಅಟ್ಟಹಾಸ ಖಂಡಿಸಿದ್ದು, ‘ಈ ದುಃಖವನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಸಾವನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ. 2026ರ ಮಾರ್ಚ್‌ ಅಂತ್ಯದೊಳಗೆ ದೇಶದಲ್ಲಿ ನಕ್ಸಲಿಸಂ ಅಂತ್ಯಗೊಳಿಸುತ್ತೇವೆ’ ಎಂದು ಟ್ವೀಟರ್‌ನಲ್ಲಿ ಗುಡುಗಿದ್ದಾರೆ.

ನಕ್ಸಲರ ಅಟ್ಟಹಾಸವನ್ನು ಛತ್ತೀಸಗಢ ಸಿಎಂ ವಿಷ್ಣು ದೇವ ಸಾಯಿ ಖಂಡಿಸಿದ್ದು, ‘ಇತ್ತೀಚೆಗೆ ಬಸ್ತರ್‌ ಪ್ರದೇಶದಲ್ಲಿ ನಡೆಸಿದ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಹತಾಶರಾಗಿ ಈ ಕೃತ್ಯ ನಡೆಸಿದ್ದಾರೆ. ಮೃತ ಸಿಬ್ಬಂದಿ ಸಾವು ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಹೋರಾಟ ಮತ್ತಷ್ಟು ಬಲವಾಗಿ ಮುಂದುವರೆಯುತ್ತದೆ’ ಎಂದಿದ್ದಾರೆ. 

2 ವರ್ಷಗಳಲ್ಲೇ ಭೀಕರ ದುರಂತ:

ಇದು ಕಳೆದ 2 ವರ್ಷಗಳಲ್ಲಿಯೇ ನಕ್ಸಲರು ನಡೆಸಿದ ಅತೀ ಭೀಕರ ದಾಳಿಯಾಗಿದೆ. 2023ರ ಏಪ್ರಿಲ್ 26ರಂದು ನಕ್ಸಲರು ದಂತೇವಾಡದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಸ್ಫೋಟಿಸಿದ್ದರು. ದುರ್ಘಟನೆಯಲ್ಲಿ 10 ಮಂದಿ ಭದ್ರತಾ ಸಿಬ್ಬಂದಿ , ಓರ್ವ ನಾಗರಿಕನನ್ನು ಹತ್ಯೆ ಮಾಡಿದ್ದರು. ಕಳೆದ ವರ್ಷ ನಕ್ಸಲ್‌ ನಿಗ್ರಹ ಸಿಬ್ಬಂದಿ, ಛತ್ತೀಸಗಢದಲ್ಲಿ 219 ನಕ್ಸಲರನ್ನು ಹತ್ಯೆ ಮಾಡಿದ್ದರು.