ಸಾರಾಂಶ
ಸಿಡ್ನಿ: ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಚಾಳಿ ಅಮೆರಿಕ, ಯೂರೋಪ್ ಬಳಿಕ ಇದೀಗ ಆಸ್ಟ್ರೇಲಿಯಾಗೂ ಕಾಲಿಟ್ಟಿದ್ದು, ವ್ಯಕ್ತಿಯೊಬ್ಬ ಕಿಕ್ಕಿರಿದ್ದು ತುಂಬಿದ್ದ ಆಸ್ಟ್ರೇಲಿಯಾದ ಸಿಡ್ನಿಯ ಶಾಪಿಂಗ್ ಮಾಲ್‌ವೊಂದರಲ್ಲಿ ಚಾಕುವಿನಿಂದ ಇರಿದು 5 ಜನರನ್ನು ಸಾಯಿಸಿದ ಭೀಕರ ಘಟನೆ ಶನಿವಾರ ನಡೆದಿದೆ. ಈ ಘಟನೆ ಆಸ್ಟ್ರೇಲಿಯಾ ಮಾತ್ರವಲ್ಲ ಜಗತ್ತನ್ನು ಬೆಚ್ಚಿ ಬೀಳಿಸಿದೆ.
ಆದರೆ ಆತ ಸುಮಾರು 8-9 ಜನಕ್ಕೆ ಇರಿದು ಮುಂದೆ ಸಾಗುತ್ತಿದ್ದಾಗ ತ್ವರಿತವಾಗಿ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ಆತನನ್ನು ಗುಂಡಿಕ್ಕಿ ಸಾಯಿಸಿದ ಪರಿಣಾಮ ಮುಂದೆ ಉಂಟಾಗಬಹುದಾಗಿದ್ದ ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದಾರೆ. ಆದಾಗ್ಯೂ ಆತ ಇರಿದ 9 ಮಂದಿಯಲ್ಲಿ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಉಳಿದವರಿಗೆ ತುರ್ತು ಚಿಕಿತ್ಸಾ ಘಟಕ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿದೆ.
ಸಿಡ್ನಿಯ ಪೂರ್ವ ಭಾಗದಲ್ಲಿರುವ ಬೋಂದಿ ಜಂಕ್ಷನ್‌ನಲ್ಲಿರುವ ವೆಸ್ಟ್‌ಫೀಲ್ಡ್ ಶಾಪಿಂಗ್ ಸೆಂಟರ್‌ನಲ್ಲಿ ಈ ಕೃತ್ಯ ನಡೆದಿದ್ದು, ಗಾಯಗೊಂಡವರ ಪೈಕಿ ಓರ್ವ ಮಹಿಳೆ ಮತ್ತು ಹಸುಗೂಸು ಸಹ ಸೇರಿದೆ ಎಂಬುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಗುಂಡಿಕ್ಕಿದ ಪೊಲೀಸರು:
ವ್ಯಕ್ತಿಯು ಇರಿತ ಪ್ರಾರಂಭಿಸಿದ ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಆತನತ್ತ ಗುಂಡು ಹಾರಿಸಿದ ಪರಿಣಾಮ ಇರಿದ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ.
ಕೃತ್ಯಕ್ಕೆ ಕಾರಣ ಗೊತ್ತಾಗಿಲ್ಲ:
ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ತಕ್ಷಣಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಇದು ಉಗ್ರ ಕೃತ್ಯವಂತೂ ಖಂಡಿತ ಆಗಿರಲು ಸಾಧ್ಯವಿಲ್ಲ ಎಂಬುದಾಗಿ ಸ್ಥಳೀಯ ನ್ಯೂ ಸೌತ್ ವೇಲ್ಸ್‌ನ ಪೊಲೀಸ್ ಕಮಿಷನರ್ ಅಂಥೋನಿ ಕುಕ್ ತಿಳಿಸಿದ್ದಾರೆ.
ಈ ಕೃತ್ಯಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಅಂಥೋಣಿ ಆಲ್ಬನೀಸ್ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ‘ಘಟನೆಯಲ್ಲಿ ನೊಂದ ಎಲ್ಲ ಆಸ್ಟ್ರೇಲಿಯನ್ನರ ಪರ ಸರ್ಕಾರ ನಿಲ್ಲುತ್ತದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.