ವಕ್ಫ್‌ ತಿದ್ದುಪಡಿ ಕಾಯ್ದೆಗೆ ದಾಖಲೆಯ 1.25 ಕೋಟಿ ಪ್ರತಿಕ್ರಿಯೆ : ತನಿಖೆ ನಡೆಸಬೇಕು ಎಂದು ಒತ್ತಾಯ

| Published : Sep 26 2024, 06:03 AM IST / Updated: Sep 26 2024, 06:04 AM IST

 Waqf Property

ಸಾರಾಂಶ

ವಕ್ಫ್‌ ತಿದ್ದುಪಡಿ ಕಾಯ್ದೆಗೆ ದಾಖಲೆಯ 1.25 ಕೋಟಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರ ಹಿಂದೆ ಚೀನಾ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಇಸ್ಲಾಮಿಕ್‌ ಮೂಲಭೂತವಾದಿಗಳ ಕೈವಾಡದ ಶಂಕೆ ಇದೆ

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯ್ದೆಗೆ ದಾಖಲೆಯ 1.25 ಕೋಟಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರ ಹಿಂದೆ ಚೀನಾ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಇಸ್ಲಾಮಿಕ್‌ ಮೂಲಭೂತವಾದಿಗಳ ಕೈವಾಡದ ಶಂಕೆ ಇದೆ. ಹೀಗಾಗಿ ಈ ಕುರಿತು ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸಬೇಕು ಎಂದು ವಕ್ಪ್‌ ತಿದ್ದುಪಡಿ ಕಾಯ್ದೆ ಪರಿಶೀಲನೆಗೆ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿ ಸದಸ್ಯ, ಬಿಜೆಪಿ ನಿಶಿಕಾಂತ್‌ ದುಬೆ ಒತ್ತಾಯ ಮಾಡಿದ್ದಾರೆ.

ಈ ನಡುವೆ ದುಬೆ ಕಳವಳವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌, ಇದು ಆಡಳಿತಾರೂಢ ಪಕ್ಷ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದೆ.

ತನಿಖೆಗೆ ಆಗ್ರಹ:

ಜೆಪಿಸಿಗೆ ಸಲ್ಲಿಕೆಯಾಗಿರುವ ದಾಖಲೆ ಪ್ರಮಾಣದ ಅಭಿಪ್ರಾಯಗಳ ಕುರಿತು ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರಿಗೆ ಪತ್ರ ಬರೆದಿರುವ ದುಬೆ, ‘ವಕ್ಫ್ ತಿದ್ದುಪಡಿ ಕುರಿತ ಸಮಿತಿಗೆ ಕಂಡುಕೇಳರಿಯದ ರೀತಿಯಲ್ಲಿ ಅಭಿಪ್ರಾಯ, ಸಲಹೆ ಸಲ್ಲಿಕೆಯಾಗಿದೆ. ಇದೊಂದು ಜಾಗತಿಕ ದಾಖಲೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದರ ಉದ್ದೇಶ ಮತ್ತು ಇಂಥ ಸಂವಹನದ ಹಿಂದಿನ ಮೂಲಗಳ ಕುರಿತು ತನಿಖೆ ಸೂಕ್ತ. ಈ ಪ್ರವೃತ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ದೇಶದ ಸಮಗ್ರತೆ ಮತ್ತು ನಮ್ಮ ಶಾಸನಾತ್ಮಕ ಪ್ರಕ್ರಿಯೆಗಳ ಸ್ವಾತಂತ್ರ್ಯದ ನಿಟ್ಟಿನಲ್ಲಿ ಈ ಕುರಿತು ತನಿಖೆ ನಡೆಸುವುದು ಅತ್ಯಗತ್ಯ’ ಎಂದು ಮನವಿ ಮಾಡಿದ್ದಾರೆ.

ಜೊತೆಗೆ, ‘ಇಂಥ ದಾಖಲೆ ಅಭಿಪ್ರಾಯ ಸಲ್ಲಿಕೆ ಹಿಂದೆ ಮೂಲಭೂತವಾದಿ ಸಂಘಟನೆಗಳು, ಝಾಕಿರ್‌ ನಾಯ್ಕ್‌ನಂಥ ಇಸ್ಲಾಮಿಕ್‌ ಬೋಧಕರು, ಚೀನಾ, ಐಎಸ್‌ಐ, ತಾಲಿಬಾನ್‌, ಬಾಂಗ್ಲಾದೇಶದ ಜಮಾತ್‌ ಎ ಇಸ್ಲಾಮಿಯಂಥ ವಿದೇಶಿ ಶಕ್ತಿಗಳ ಕೈವಾಡ ತಳ್ಳಿಹಾಕುವಂತಿಲ್ಲ. ಜೊತೆಗೆ ಅಭಿಪ್ರಾಯಗಳು ಸಲ್ಲಿಕೆಯಾಗಿರುವ ಭೂಪ್ರದೇಶಗಳ ಮೂಲದ ಬಗ್ಗೆಯೂ ತನಿಖೆ ಸೂಕ್ತ. ಏಕೆಂದರೆ ಇಷ್ಟೊಂದು ದೊಡ್ಡ ಪ್ರಮಾಣದ ಅಭಿಪ್ರಾಯ ಕೇವಲ ಭಾರತದ ಭೂಭಾಗವೊಂದರಿಂದಲೇ ಸಲ್ಲಿಕೆ ಸಾಂಖ್ಯಿಕವಾಗಿ ಅಸಾಧ್ಯ’ ಎಂದು ದುಬೆ ವಾದಿಸಿದ್ದಾರೆ.