ಸಾರಾಂಶ
ನವದೆಹಲಿ/ಚಂಡೀಗಢ: ಹರ್ಯಾಣ ವಿಧಾನಸಭೆ ಚುನಾವಣೆ ಮತ ಎಣಿಕೆ ಭಾರಿ ಹೈಡ್ರಾಮಾಗೆ ಸಾಕ್ಷಿ ಆಯಿತು. ಆರಂಭಿಕ ಸುತ್ತಿನಲ್ಲಿ ಹಿಂದುಳಿದಿದ್ದ ಬಿಜೆಪಿ, ಏಕಾಏಕಿ ಫೀನಿಕ್ಸ್‌ನಂತೆ ಪುಟಿದೆದ್ದು ಮುನ್ನಡೆ ಸಾಧಿಸಿದರೆ, ಆರಂಭದಲ್ಲಿ ಮುನ್ನಡೆ ಹೊಂದಿದ್ದ ಕಾಂಗ್ರೆಸ್ ದಿಢೀರನೇ ಹಿನ್ನಡೆ ಕಂಡು ಆಘಾತ ಅನುಭವಿಸಿತು.ಮತ ಎಣಿಕೆ ಆರಂಭದ 1 ತಾಸಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಹರ್ಯಾಣದಲ್ಲಿನ ಕಾಂಗ್ರೆಸ್ಸಿಗರು ತಮ್ಮ ತಮ್ಮ ಊರುಗಳಲ್ಲಿ ಹಾಗೂ ದಿಲ್ಲಿಯರುವ ಕಾರ್ಯಕರ್ತರು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಟಾಕಿ ಸಿಡಿಸಲು ಮತ್ತು ಜಿಲೇಬಿ, ಬೂಂದಿ ಲಾಡು, ಮೋತಿಚೂರ್ ಲಾಡು ಹಂಚಲು ಪ್ರಾರಂಭಿಸಿದರು. ಕಾಂಗ್ರೆಸ್ ಸಿಎಂ ಅಭ್ಯರ್ಥಿಗಳಾದ ಭೂಪಿಂದರ್ ಸಿಂಗ್ ಹೂಡಾ ಹಾಗೂ ಕುಮಾರಿ ಸೆಲ್ಜಾ ಅವರು ತಾವು ಮುಂದಿನ ಸಿಎಂ ಆಗಬಹುದು ಎಂಬರ್ಥದಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡತೊಡಗಿದರು.ಆದರೆ, 1 ತಾಸು ಕಳೆದ ನಂತರ ಮುಂದಿನ ಸುತ್ತುಗಳಲ್ಲಿ ಉಬ್ಬರವಿಳಿತ ಆಯಿತು. ಏಕಾಏಕಿ ಬಿಜೆಪಿ ಮುನ್ನಡೆ ಕಂಡು ಬಹುಮತದತ್ತ ಸಾಗಿತು. ಆಗ ಸಂಭ್ರಮಾಚರಣೆ ಬಿಜೆಪಿ ಕೇಂದ್ರ ಕಚೇರಿಗೆ ಸ್ಥಳಾಂತರಗೊಂಡಿತು. ಬಿಜೆಪಿ ಕಚೇರಿಯಲ್ಲಿ
ಮಾಧ್ಯಮದವರಿಗೆ ಲಘು ಉಪಹಾರ ನೀಡಿ ಲಡ್ಡುಗಳನ್ನು ತರಲಾಯಿತು. ಹರ್ಯಾಣದಾದ್ಯಂತ ಬಿಜೆಪಿಯವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.