ಬಿಜೆಪಿಗೆ ಭರ್ಜರಿ ₹2244 ಕೋಟಿ, ಕಾಂಗ್ರೆಸ್‌ಗೆ ಬರೀ ₹298 ಕೋಟಿ - ದೇಣಿಗೆ ಸಂಗ್ರಹ

| Published : Dec 27 2024, 07:05 AM IST

bjp congress

ಸಾರಾಂಶ

ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ 2023-24ನೇ ಸಾಲಿನಲ್ಲಿ 2244 ಕೋಟಿ ರು. ಸಂಗ್ರಹಿಸುವ ಮೂಲಕ, ಅತಿ ಹೆಚ್ಚು ಚುನಾವಣಾ ದೇಣಿಗೆ ಸಂಗ್ರಹಿಸಿದ ಪಕ್ಷವಾಗಿ ಹೊರಹೊಮ್ಮಿದೆ.

ನವದೆಹಲಿ: ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ 2023-24ನೇ ಸಾಲಿನಲ್ಲಿ 2244 ಕೋಟಿ ರು. ಸಂಗ್ರಹಿಸುವ ಮೂಲಕ, ಅತಿ ಹೆಚ್ಚು ಚುನಾವಣಾ ದೇಣಿಗೆ ಸಂಗ್ರಹಿಸಿದ ಪಕ್ಷವಾಗಿ ಹೊರಹೊಮ್ಮಿದೆ.

ಇನ್ನು ತೆಲಂಗಾಣದಲ್ಲಿ ಈ ಹಿಂದೆ ಅಧಿಕಾರ ನಡೆಸಿದ್ದ ಕೆ. ಚಂದ್ರಶೇಖರ್‌ ರಾವ್‌ ಅಧ್ಯಕ್ಷತೆಯ ಬಿಆರ್‌ಎಸ್‌ 580 ಕೋಟಿ ರು.ನೊಂದಿಗೆ 2ನೇ ಸ್ಥಾನ ಮತ್ತು ಪ್ರಮುಖ ವಿಪಕ್ಷ ಕಾಂಗ್ರೆಸ್‌ 298 ಕೋಟಿ ರು.ನೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ ವೈಎಸ್‌ಆರ್‌ ಕಾಂಗ್ರೆಸ್‌ 62 ಕೋಟಿ ರು.,ಆಮ್‌ಆದ್ಮಿ ಪಕ್ಷ 11.1 ಕೋಟಿ, ಸಿಪಿಎಂ 7.6 ಕೋಟಿ ರು. ಸಂಗ್ರಹಿಸಿವೆ.

2023-24ನೇ ಸಾಲಿನಲ್ಲಿ 20 ಸಾವಿರ ರು.ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ದೇಣಿಗೆ ಮೂಲಕ ವಿವಿಧ ರಾಜಕೀಯ ಪಕ್ಷಗಳು ಸಂಗ್ರಹಿಸಿದ ದೇಣಿಗೆ ಕುರಿತ ಕೇಂದ್ರ ಚುನಾವಣಾ ಆಯೋಗ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮಾಹಿತಿ ಇದೆ. ಈ ವರದಿಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ಸಂಗ್ರಹಿಸಿದ ಹಣವನ್ನು ನಮೂದು ಮಾಡಿಲ್ಲ. ಈ ಮಾಹಿತಿಯನ್ನು ಪಕ್ಷಗಳು ಲೆಕ್ಕಪರಿಶೋಧನಾ ವರದಿಗೆ ನೀಡಬೇಕಾಗಿರುವ ಕಾರಣ, ಅದನ್ನು ಅವು ಪ್ರತ್ಯೇಕವಾಗಿ ಸಲ್ಲಿಕೆ ಮಾಡಲಿವೆ.

ಪ್ರುಡೆಂಟ್‌ ಟ್ರಸ್ಟ್‌ ನಂ.1:

ದೇಣಿಗೆಯಲ್ಲಿ ಪ್ರುಡೆಂಟ್‌ ಎಲೆಕ್ಟೋರಲ್‌ ಟ್ರಸ್ಟ್‌ ಮೊದಲ ಸ್ಥಾನದಲ್ಲಿದೆ. ಅದು ಬಿಜೆಪಿಗೆ 723 ಕೋಟಿ ರು., ಕಾಂಗ್ರೆಸ್‌ 156 ಕೋಟಿ ರು., ಬಿಆರ್‌ಎಸ್‌ಗೆ 85 ಕೋಟಿ, ವೈಎಸ್‌ಆರ್‌ ಕಾಂಗ್ರೆಸ್‌ಗೆ 62.5 ಕೋಟಿ ದೇಣಿಗೆ ನೀಡಿದೆ.

ಕಾಂಗ್ರೆಸ್‌ಗೆ ಹ್ಯಾಪಿ ಬರ್ತಡೆ ಹೆಸರಲ್ಲಿ ದೇಣಿಗೆ:

ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಜನರು ‘ಪಕ್ಷದ ನಾಯಕರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ. ಇದರ ಜೊತೆಗೆ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸಹ ದೇಣಿಗೆ ನೀಡಿದ್ದಾರೆ.