ಸಾರಾಂಶ
ಅರವಿಂದ್ ಕೇಜ್ರಿವಾಲ್ ರಾಜೀನಾಮೆಯ ನಂತರ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಆತಿಶಿ ಮಾರ್ಲೇನಾ, ಕೇಜ್ರಿವಾಲ್ ಕುಳಿತಿದ್ದ ಸಿಎಂ ಕುರ್ಚಿಯಲ್ಲಿ ಕೂರಲು ನಿರಾಕರಿಸಿದ್ದಾರೆ
ನವದೆಹಲಿ : ಅರವಿಂದ್ ಕೇಜ್ರಿವಾಲ್ ರಾಜೀನಾಮೆಯ ನಂತರ ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಆತಿಶಿ ಮಾರ್ಲೇನಾ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಕೇಜ್ರಿವಾಲ್ ಕೂರುತ್ತಿದ್ದ ಸಿಎಂ ಕುರ್ಚಿಯಲ್ಲಿ ಕೂರಲು ನಿರಾಕರಿಸಿ ಅದರ ಪಕ್ಕ ಇನ್ನೊಂದು ಕುರ್ಚಿ ಹಾಕಿಕೊಂಡು ಆಸೀನರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಆತಿಶಿ, ‘ರಾಮಾಯಣದಲ್ಲಿ ಭರತ ತನ್ನ ಸಹೋದರ ಶ್ರೀ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ಮಾಡಿದಂತೆ ನಾನು ಮುಂದಿನ 4 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಘನತೆಗೆ ಉದಾಹರಣೆಯಾಗಿರುವ ಕೇಜ್ರಿವಾಲ್ ಅವರ ಸ್ಥಾನ ಖಾಲಿಯೇ ಇರಲಿದೆ. ಅವರು ಪುನಃ ಗೆದ್ದ ಬಳಿಕ ಆ ಸ್ಥಾನ ಭರ್ತಿ ಆಗಲಿದೆ’ ಎಂದರು.
ಬಿಜೆಪಿ ಕಿಡಿ:
ಈ ನಡೆ ಟೀಕಿಸಿರುವ ದೆಹಲಿ ಬಿಜೆಪಿಯ ಮುಖ್ಯಸ್ಥ ವೀರೇಂದ್ರ ಸಚದೇವ, ‘ಆತಿಶಿ ಮಾಡಿದ್ದು ಸರಿಯಲ್ಲ. ಇದು ಸಾಂವಿಧಾನಿಕ ನಿಯಮಗಳು ಮತ್ತು ಸಿಎಂ ಸ್ಥಾನಕ್ಕೆ ಅವಮಾನ. ಅವರು ದೆಹಲಿ ಜನತೆಯ ಮನಸ್ಸನ್ನು ನೋಯಿಸಿದ್ದಾರೆ. ಕೇಜ್ರಿವಾಲ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರ ನಡೆಸುತ್ತಾರೆಯೇ ಎಂಬ ಬಗ್ಗೆ ಉತ್ತರಿಸಬೇಕು’ ಎಂದಿದ್ದಾರೆ.