ಸಾರಾಂಶ
ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡುತ್ತಿದ್ದಂತೆಯೇ ಆಪ್ ಕಾರ್ಯಕರ್ತರು ದಿಲ್ಲಿಯಲ್ಲಿ ಭಾರಿ ಸಂಭ್ರಮಾಚರಣೆ ನಡೆಸಿದ್ದಾರೆ.
ಈ ಕುರಿತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು ‘ಸತ್ಯಮೇವ ಜಯತೆ’ ಎಂಬ ಟ್ವೀಟ್ ಮಾಡಿದ್ದಾರೆ. ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಇದು ಪ್ರಜಾಸತ್ತೆಗೆ ಸಂದ ಜಯ ಎಂದಿದ್ದಾರೆ. ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ‘ಇದು ಚುನಾವಣೆಯಲ್ಲಿ ಗೇಮ್ ಚೇಂಜರ್. ಇಂಡಿಯಾ ಕೂಟಕ್ಕೆ ವರದಾನವಾಗಲಿದೆ’ ಎಂದಿದ್ದಾರೆ.
ಕಾಂಗ್ರೆಸ್, ಟಿಎಂಸಿ ಸೇರಿ ಅನೇಕ ಪಕ್ಷಗಳು ಕೋರ್ಟ್ ತೀರ್ಮಾನ ಸ್ವಾಗತಿಸಿವೆ.
ದೆಹಲಿ ಎಎಪಿ ಕಚೇರಿ ಬಳಿ ಎಎಪಿ ಕಾರ್ಯಕರ್ತರು ಸಂಭ್ರಮಿಸಿದರು. ಕೇಜ್ರಿವಾಲ್ ಪರ ಘೋಷಣೆ ಕೂಗಿದರು. ಜೈಲಿನಿಂದ ಹೊರಬಂದ ಬಳಿಕ ಡೊಳ್ಳು ಬಾರಿಸಿ ಕೇಕೆ ಹಾಕಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ಸಿಂಗ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ‘ಸುಪ್ರೀಂ ಕೋರ್ಟ್ ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂ.1ರ ವರೆಗೂ ಮಧ್ಯಂತರ ಜಾಮೀನು ಜಾರಿಗೊಳಿಸಿದೆ. ಇದನ್ನು ಎಎಪಿ ಸ್ವಾಗತಿಸುತ್ತದೆ. ಸತ್ಯ ಯಾವತ್ತಿದ್ದರೂ ಗೆದ್ದೇ ಗೆಲ್ಲುತ್ತದೆ. ಆದರೆ ಸ್ವಲ್ಪ ತಡವಾಗಬಹುದು. ಸತ್ಯಕ್ಕೆ ಜಯಸಿಕ್ಕಾಗ ಸರ್ವಾಧಿಕಾರ ಕೊನೆಗೊಳ್ಳುತ್ತದೆ. ಸತ್ಯಮೇವ ಜಯತೆ’ ಎಂದು ಪೋಸ್ಟ್ ಮಾಡಿದ್ದಾರೆ.
ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾ.21 ರಂದು ಬಂಧಿಸಿತ್ತು.