ಸಾರಾಂಶ
ಶಿಮ್ಲಾ: ಹಿಮಾಚಲ ಪ್ರದೇಶದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮತಗಳು 34-34 ಟೈ ಆದಾಗ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ ಲಾಟರಿ ಮೂಲಕ ಆಯ್ಕೆ ನಡೆದಾಗ ಸೋತು ಬಿಜೆಪಿಯ ಹರ್ಷ ಮಹಾಜನ್ ಗೆದ್ದಿದ್ದರು. ಆದರೆ ಸಿಂಘ್ವಿ ಹೆಸರು ಲಾಟರಿಯಲ್ಲಿ ಆಯ್ಕೆಯಾದರೂ ಅವರು ಸೋಲು ಅನುಭವಿಸಿದರು ಎಂಬುದು ಕುತೂಹಲಕರ ವಿಚಾರ.ಇದರ ಹಿಂದೆ ಒಂದು ವಿಚಿತ್ರ ನಿಯಮದ ರಹಸ್ಯವಿದೆ. ರಾಜ್ಯಸಭೆ ಚುನಾವಣೆಯಲ್ಲಿ ಟೈ ಆದ ಪಕ್ಷದಲ್ಲಿ ಚುನಾವಣಾ ಅಧಿಕಾರಿಯು ಒಂದು ಬಾಕ್ಸ್‌ನಲ್ಲಿ ಅಭ್ಯರ್ಥಿಗಳ ಹೆಸರಿನೊಂದಿಗೆ ಸ್ಲಿಪ್‌ಗಳನ್ನು ಇರಿಸುತ್ತಾರೆ. ಸ್ಲಿಪ್‌ಗಳನ್ನು ಡ್ರಾ ಮಾಡುವ ಮೊದಲು ಅದನ್ನು ಅಲ್ಲಾಡಿಸಲಾಗುತ್ತದೆ. ಯಾರ ಸ್ಲಿಪ್ ಡ್ರಾ ಮಾಡಲ್ಪಟ್ಟಿದೆಯೋ ಅವರು ಸೋತರು ಎಂದು ಘೋಷಿಸಲಾಗುತ್ತದೆ. ಪೆಟ್ಟಿಗೆಯಲ್ಲಿ ಯಾರ ಸ್ಲಿಪ್ ಉಳಿದಿದೆಯೋ ಅವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ.ಈ ರೀತಿ ಚುನಾವಣಾಧಿಕಾರಿಯು ಸ್ಲಿಪ್ ಎತ್ತಿದಾಗ ಸಿಂಘ್ವಿ ಹೆಸರು ಆಯ್ಕೆಯಾಗಿದೆ. ಮಹಾಜನ್ ಹೆಸರಿದ್ದ ಸ್ಲಿಪ್ ಡಬ್ಬದಲ್ಲೇ ಉಳಿದಿದೆ. ಹೀಗಾಗಿ ಸಿಂಘ್ವಿ ಪರಾಜಿತ, ಮಹಾಜನ್ ವಿಜೇತ ಎಂದು ಸಾರಲಾಗಿದೆ.ಇದಕ್ಕೆ ಬೇಸರಿಸಿರುವ ಸಿಂಘ್ವಿ, ‘ಅದೃಷ್ಟ ನನ್ನ ಪಾಲಿಗೆ ಇರಲಿಲ್ಲ’ ಎಂದು ವ್ಯಥೆಪಟ್ಟಿದ್ದಾರೆ.