ಸಾರಾಂಶ
ಹೈದರಾಬಾದ್ : ಡಿ.4 ರಂದು ಇಲ್ಲಿನ ಸಂಧ್ಯಾ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಮತ್ತು ‘ಪುಷ್ಪಾ’ ಚಿತ್ರದ ನಿರ್ಮಾಪಕರು ಬುಧವಾರ 2 ಕೋಟಿ ರು. ಆರ್ಥಿಕ ನೆರವು ಘೋಷಿಸಿದ್ದಾರೆ.ಅಲ್ಲು ಅರ್ಜುನ್ (1 ಕೋಟಿ), ಪುಷ್ಪಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ (50 ಲಕ್ಷ) ಮತ್ತು ಚಿತ್ರದ ನಿರ್ದೇಶಕ ಸುಕುಮಾರ್ (50 ಲಕ್ಷ) ಬಾಲಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಘೋಷಿಸಿದ್ದಾರೆ.
ಡಿ.4 ರಂದು ‘ಪುಷ್ಪ 2’ ಚಿತ್ರ ಪ್ರದರ್ಶನ ವೇಳೆ 35 ವರ್ಷದ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು ಮತ್ತು ಅವರ 8 ವರ್ಷದ ಮಗ ತೀವ್ರ ಗಾಯಗೊಂಡಿದ್ದರು. ಈ ಘಟನೆಗೆ ಅಲ್ಲು ಅರ್ಜುನ್ ನಿರ್ಲಕ್ಷ್ಯ ಕಾರಣ ಎಂದು ಅವರನ್ನು ಬಂಧಿಸಲಾಗಿತ್ತು.
ಇಂದು ಸಿಎಂ-ತೆಲುಗು ಚಿತ್ರರಂಗ ಸಭೆ
ಹೈದರಾಬಾದ್: ಅಲ್ಲು ಪ್ರಕರಣದ ನಂತರ ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗೂ ಚಿತ್ರರಂಗದ ನಡುವೆ ಸಂಘರ್ಷ ಏರ್ಪಟ್ಟಿದೆ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ಮತ್ತು ಪ್ರಮುಖ ನಿರ್ಮಾಪಕ ದಿಲ್ ರಾಜು ಅವರು, ‘ಸರ್ಕಾರ ಮತ್ತು ಚಲನಚಿತ್ರೋದ್ಯಮದ ನಡುವೆ ಆರೋಗ್ಯಕರ ಸಂಬಂಧ ಅಗತ್ಯ ಇದೆ’ ಎಂದು ಹೇಳಿದ್ದು, ಚಿತ್ರರಂಗದ ನಿಯೋಗ ಗುರುವಾರ ಸಿಎಂ ರೆಡ್ಡಿ ಅವರನ್ನು ಭೇಟಿ ಮಾಡಲಿದೆ ಎಂದಿದ್ದಾರೆ.