ಡಿಎಂಡಿಕೆ ಸಂಸ್ಥಾಪಕ, ನಟ ವಿಜಯಕಾಂತ್‌ ನಿಧನ

| Published : Dec 29 2023, 01:30 AM IST

ಸಾರಾಂಶ

ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯದ ಕನಸು ಬಿತ್ತಿದ್ದ ‘ಕ್ಯಾಪ್ಟನ್‌’ ವಿಜಯಕಾಂತ್‌ ಇನ್ನಿಲ್ಲ. ಕ್ಯಾಪ್ಟನ್‌ ಚಿತ್ರದ ಮೂಲಕ ಚಲನಚಿತ್ರದಲ್ಲಿ ಛಾಪು ಮೂಡಿಸಿ ಜಯಲಲಿತಾ ಮತ್ತು ಕರುಣಾನಿಧಿ ನಿಧನಾನಂತರ ಪರ್ಯಾಯ ರಾಜಕೀಯ ಕನಸನ್ನು ತಮಿಳುನಾಡಿನಲ್ಲಿ ಕಟ್ಟುವ ಮಹತ್ವಾಕಾಂಕ್ಷೆ ಹೊಂದಿದ್ದ ವಿಜಯಕಾಂತ್‌ ನಿಧನರಾಗಿದ್ದಾರೆ.

ಚೆನ್ನೈ: ತಮಿಳು ಸಿನಿಮಾರಂಗದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗೆ ಪರ್ಯಾಯ ರಾಜಕಾರಣದ ಕನಸು ಬಿತ್ತಿದ್ದ ಡಿಎಂಡಿಕೆ ಸಂಸ್ಥಾಪಕ ಮತ್ತು ಖ್ಯಾತ ತಮಿಳು ನಟ ವಿಜಯಕಾಂತ್‌ (71) ಅನಾರೋಗ್ಯದಿಂದ ಗುರುವಾರ ನಿಧನರಾದರು. ಕೋವಿಡ್‌ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿಜಯ್‌ ದಾಖಲಾಗಿದ್ದ ಆಸ್ಪತ್ರೆ ತಿಳಿಸಿದೆ. ವಿಜಯಕಾಂತ್‌ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ಸಂತಾಪ ಸೂಚಿಸಿದ್ದಾರೆ. ಪತ್ನಿ ಪ್ರೇಮಲತಾ ಹಾಗೂ ಇಬ್ಬರು ಪುತ್ರರನ್ನು ವಿಜಯಕಾಂತ್‌ ಅಗಲಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿಜಯಕಾಂತ್ ತಮಿಳು ನಾಡಿನ ಪ್ರಭಾವಿ ರಾಜಕಾರಣಿಗಳು ಮತ್ತು ದಿವಂಗತ ಮಾಜಿ ಸಿಎಂಗಳಾದ ಜಯಲಲಿತ ಹಾಗೂ ಕರುಣಾನಿಧಿಗೆ ವಿರೋಧವಾಗಿ ರಾಜಕೀಯ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಹೋರಾಡಿದ ಹೆಗ್ಗಳಿಕೆ ಹೊಂದಿದ್ದರು. ತಮಿಳು ನಾಡಿನ ಇತಿಹಾಸದಲ್ಲೇ ಮೊದಲ ಬಾರಿಗೆ ಭ್ರಷ್ಟಾಚಾರದ ವಿರುದ್ಧ ಭಾರೀ ಹೋರಾಟ ನಡೆಸಿ ಜನರಿಗೆ ನೂತನ ಆಯ್ಕೆಯೊಂದನ್ನು ತೆರೆದಿಟ್ಟ ವಿಜಯಕಾಂತ್ ‘ಕರುಪ್ಪು ಎಂಜಿಆರ್‌’ (ಕಪ್ಪು ಎಂಜಿಆರ್‌) ಎಂದೇ ಖ್ಯಾತರಾಗಿದ್ದರು. 2011ರಿಂದ 2016ರವರೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಗಮನ ಸೆಳೆದಿದ್ದರು. ತಮಿಳು ನಾಡಿನ ಮಧುರೈಯಲ್ಲಿ ಜನಿಸಿದ್ದ ವಿಜಯಕಾಂತ್‌ ತಂದೆ ಕೆಎನ್ ಅಳಗರಸಾಮಿ ಮತ್ತು ತಾಯಿ ಆಂಡಾಳ್ ಅಳಗರಸಾಮಿ. ವಿಜಯಕಾಂತ್‌ ಅವರ ಮೂಲ ಹೆಸರು ವಿಜಯರಾಜ್‌. 1991ರಲ್ಲಿ ‘ಕ್ಯಾಪ್ಟನ್‌ ಪ್ರಭಾಕರನ್‌’ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಪಡೆದ ನಟ ವಿಜಯಕಾಂತ್‌ರನ್ನು ಅಲ್ಲಿನ ಜನರು ‘ಕ್ಯಾಪ್ಟನ್‌’ ಎಂದೇ ಕರೆಯುತ್ತಿದ್ದರು. ಅಲ್ಲದೇ ಒಂದೇ ವರ್ಷದಲ್ಲಿ ಇವರ 18 ಸಿನಿಮಾಗಳು ತೆರೆ ಕಾಣುವ ಮೂಲಕ ವಿಶಿಷ್ಠ ದಾಖಲೆಯನ್ನು ಸಹ ನಿರ್ಮಿಸಿದ್ದರು. ಅಲ್ಲದೇ ತಮಿಳು ಭಾಷೆಯಲ್ಲಿ ಮೊದಲ 3ಡಿ ಸಿನಿಮಾದಲ್ಲಿ ನಟಿಸಿದ ಖ್ಯಾತಿಯನ್ನು ಇವರು ಹೊಂದಿದ್ದಾರೆ. 2005ರಲ್ಲಿ ರಾಜ್ಯ ರಾಜಕೀಯ ಪ್ರವೇಶ ಮಾಡಿದ ವಿಜಯ್‌, ಡಿಎಂಡಿಕೆ ಎಂಬ ನೂತನ ಪಕ್ಷವನ್ನು ಕಟ್ಟಿದರು. ಡಿಎಂಡಿಕೆ, ರಾಜ್ಯದಲ್ಲಿ ಗಮನಾರ್ಹ ಸಾಧನೆ ಕಾಣದೇ ಹೋದರೂ ಡಿಎಂಕೆ ಮತ್ತು ಎಐಡಿಎಂಕೆಗಳಿಗೆ ಬಲಿಷ್ಠ ಪರ್ಯಾಯವಾಗಿ ಹೊರಹೊಮ್ಮಿತು.