ತೆಲುಗರ ಬಗ್ಗೆ ಅವಹೇಳನ: ಹೇಳಿಕೆ ಹಿಂಪಡೆದ ನಟಿ ಕಸ್ತೂರಿ

| Published : Nov 06 2024, 11:45 PM IST

ಸಾರಾಂಶ

ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಭಾಷಿಕರು 300 ವರ್ಷ ಹಿಂದೆ ರಾಣಿಯರ ಸೇವೆಗೆ ತಮಿಳುನಾಡಿಗೆ ಬಂದಿದ್ದರು ಎಂಬ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಟಿ ಕಸ್ತೂರಿ ಶಂಕರ್, ಆ ಹೇಳಿಕೆಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.

ಚೆನ್ನೈ: ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಭಾಷಿಕರು 300 ವರ್ಷ ಹಿಂದೆ ರಾಣಿಯರ ಸೇವೆಗೆ ತಮಿಳುನಾಡಿಗೆ ಬಂದಿದ್ದರು ಎಂಬ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಟಿ ಕಸ್ತೂರಿ ಶಂಕರ್, ಆ ಹೇಳಿಕೆಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ. ಬ್ರಾಹ್ಮಣರನ್ನು ಬೆಂಬಲಿಸಲು ಹಿಂದೂ ಮಕ್ಕಳ್‌ ಕಟ್ಚಿ ಆಯೋಜಿಸಿದ್ದ ಚಳಚಳಿಯಲ್ಲಿ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಯಾಚಿಸಿರುವ ಕಸ್ತೂರಿ, ‘ವಿಸ್ತೃತ ತೆಲುಗು ಕುಟುಂಬಗಳಿಗೆ ನೋವುಂಟುಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನ.3ರಂದು ಮಾಡಿದ ಭಾಷಣದಲ್ಲಿ ತೆಲುಗರ ಬಗ್ಗೆ ಆಡಿದ ಮಾತುಗಳನ್ನು ಹಿಂಪಡೆಯುತ್ತೇನೆ’ ಎಂದರು. ಅಂತೆಯೇ, ‘ನನ್ನ ಹೇಳಿಕೆ ಕೆಲ ವ್ಯಕ್ತಿಗಳ ಕುರಿತಾಗಿ ಇತ್ತೇ ಹೊರತು ತೆಲುಗು ಸಮುದಾಯದ ಬಗ್ಗೆಯಲ್ಲ. ಈ ವಿವಾದವು ನಾನು ಉಲ್ಲೇಖಿಸಿದ ಅನ್ಯ ಮುಖ್ಯ ಅಂಶಗಳಿಂದ ಗಮನವನ್ನು ಬೇರೆಡೆ ಸೆಳೆದಿರುವುದು ದುರಾದೃಷ್ಟಕರ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

==

ತೆಲಂಗಾಣದಲ್ಲಿ ಜಾತಿ ಗಣತಿ ಶುರು

ಹೈದರಾಬಾದ್‌: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಿಎಂ ರೇವಂತ್‌ ರೆಡ್ಡಿ ನೇತೃತ್ವದ ಸರ್ಕಾರ ಸಮಗ್ರ ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಹಾಗೂ ಜಾತಿ ಗಣತಿಯನ್ನು ಬುಧವಾರ ಆರಂಭಿಸಿದೆ.ನ.6ರಿಂದ ನ.8ರ ವರೆಗೆ ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡಿ, ನಂತರ ನ.9ರಿಂದ ಪ್ರತಿ ಮನೆಯ ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಗಣತಿಯನ್ನು ಸಿಎಂ ರೆಡ್ಡಿ, ತುಳಿತಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯ ಹಾಗೂ ಅವಕಾಶಗಳ ಸಮಾನತೆಯನ್ನು ಒದಗಿಸಲು ನಡೆಸುತ್ತಿರುವ ‘ಯಜ್ಞ’ ಎಂದು ಬಣ್ಣಿಸಿದ್ದು, ರಾಹುಲ್‌ ಗಾಂಧಿ ನಾಯಕತ್ವದಲ್ಲಿ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ನಡೆಯುತ್ತಿರುವ ಸಾಹಸ ಎಂದು ಎಕ್ಸ್‌ನಲ್ಲಿ ಪೊಸ್ಟ್‌ ಮಾಡಿದ್ದಾರೆ.

==

2025ರ ಕ್ವಾಡ್‌ ಶೃಂಗ ಭಾರತದಲ್ಲಿ: ಟ್ರಂಪ್ ಭಾಗಿ

ವಾಷಿಂಗ್ಟನ್‌: ಕ್ವಾಡ್ ಶೃಂಗಸಭೆಯ 2025 ರ ಆವೃತ್ತಿಯನ್ನು ಭಾರತವು ಆಯೋಜಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಭೆಯಲ್ಲಿ ಹೊಸದಾಗಿ ಚುನಾಯಿತರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪಾಲ್ಗೊಳ್ಳಲಿದ್ದಾರೆ.ಕ್ವಾಡ್ ಶೃಂಗಸಭೆಯನ್ನು ಮೂಲತಃ ಈ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನಾಯಕರ ವೇಳಾಪಟ್ಟಿ ಸರಿಹೊಂದದ ಕಾರಣ ಅಮೆರಿಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಮುಂದಿನ ಸಭೆ ಭಾರತದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರಂಪ್‌ ಜತೆಗೆ ಜಪಾನ್‌, ಆಸ್ಟ್ರೇಲಿಯಾ ಪ್ರಧಾನಿಗಳು ಪಾಲ್ಗೊಳ್ಳಲಿದ್ದಾರೆ ಎಮದುಇ ಮೂಲಗಳು ಹೇಳಿವೆ.

==

ಟಿಟಿಡಿ ಹೊಸ ಅಧ್ಯಕ್ಷರಾಗಿ ಬಿ.ಆರ್. ನಾಯ್ಡು ಶಪಥ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಬಿ.ಆರ್‌. ನಾಯ್ಡು ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲ ರಾವ್‌ ಅವರು ದೇಗುಲದೊಳಗಿನ ಚಿನ್ನದ ಬಾಗಿಲಿನ ಬಳಿ ನಾಯ್ಡು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸಮಾರಂಭದ ನಂತರ ನೂತನ ಅಧ್ಯಕ್ಷರು ಕುಟುಂಬ ಸಮೇತವಾಗಿ ದೇವರ ದರ್ಶನ ಪಡೆದರು.

ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಟಿಟಿಡಿಗೆ ಅಧ್ಯಕ್ಷ ನಾಯ್ಡು ಸೇರಿದಂತೆ 24 ಸದಸ್ಯರನ್ನೊಳಗೊಂಡ ಹೊಸ ಮಂಡಳಿಯನ್ನು ರಚಿಸಿತ್ತು. ನಾಯ್ಡು ಅವರು ವೆಂಕಟೇಶ್ವರ ದೇಗುಲದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳೇ ಆಗಿರಬೇಕೆಂದು ಹೇಳಿಕೆ ನೀಡಿದ್ದರು.