ಸಾಲ ಮರುಪಾವತಿಸದ ಕಾರಣ ಖ್ಯಾತ ನಟ ರಾಜಪಾಲ್‌ ಯಾದವ್‌ ಉತ್ತರ ಪ್ರದೇಶದ ಶಹಜಹಾನ್‌ಪುರದ ಮನೆ ಜಪ್ತಿ

| Published : Aug 15 2024, 01:49 AM IST / Updated: Aug 15 2024, 04:21 AM IST

ಸಾರಾಂಶ

ಸಾಲ ಮರುಪಾವತಿಸದ ಕಾರಣ ಖ್ಯಾತ ನಟ ರಾಜಪಾಲ್‌ ಯಾದವ್‌ ಅವರ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿರುವ ಮನೆಯ ಕೆಲವು ಭಾಗಗಳನ್ನು ಮುಂಬೈ ಮೂಲದ ಬ್ಯಾಂಕ್‌ ಜಪ್ತಿ ಮಾಡಿದೆ.

ಶಹಜಹಾನ್‌ಪುರ: ಸಾಲ ಮರುಪಾವತಿಸದ ಕಾರಣ ಖ್ಯಾತ ನಟ ರಾಜಪಾಲ್‌ ಯಾದವ್‌ ಅವರ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿರುವ ಮನೆಯ ಕೆಲವು ಭಾಗಗಳನ್ನು ಮುಂಬೈ ಮೂಲದ ಬ್ಯಾಂಕ್‌ ಜಪ್ತಿ ಮಾಡಿದೆ.

ರಾಜಪಾಲ್‌ ಯಾದವ್ ಅವರು 2005 ರಲ್ಲಿ ತಮ್ಮ ಪೋಷಕರ ಹೆಸರಿನಲ್ಲಿ ‘ನವರಂಗ್ ಗೋದಾವರಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್’ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಸ್ಥಾಪಿಸಿದ್ದರು. ಇದಕ್ಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ 5 ಕೋಟಿ ರು. ಸಾಲ ಪಡೆದಿದ್ದರು. ಅದು ಈಗ 11 ಕೋಟಿ ರು. ಆಗಿದೆ. ಈ ಸಾಲಕ್ಕೆ ಮನೆ ಅಡ ಇಟ್ಟಿದ್ದರು.ಸಾಲ ಮರು ಪಾವತಿಸಿದ ಕಾರಣ ಮನೆಯನ್ನು ಜಪ್ತಿ ಮಾಡಲಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

==

ಜೈಲಲ್ಲೇ ಕೇಜ್ರಿ ಸ್ವಾತಂತ್ರ್ಯ ದಿನ: ಮಧ್ಯಂತರ ಜಾಮೀನಿಗೆ ಸುಪ್ರೀಂ ನಕಾರ

ನವದೆಹಲಿ: ಅಬಕಾರಿ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಇದೇ ವೇಳೆ, ಸಿಬಿಐಗೆ ಕೋರ್ಟ್‌ ನೋಟಿಸ್‌ ನೀಡಿದ್ದು, ವಿಚಾರಣೆಯನ್ನು 23ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ಕೇಜ್ರಿವಾಲ್‌ಗೆ ಜೈಲಲ್ಲೇ ಸ್ವಾತಂತ್ರ್ಯ ದಿನಾಚರಣೆ ಮಾಡಬೇಕಾಗಿ ಬಂದಿದೆ.

ಆ. 5 ರಂದು ದೆಹಲಿ ಹೈಕೋರ್ಟ್‌, ಕೇಜ್ರಿವಾಲ್ ಅವರನ್ನು ಸಿಬಿಐ ಬಂಧನ ಮಾಡಿರುವುದು ಕಾನೂನಾತ್ಮಕ, ಇದರಲ್ಲಿ ತನಿಖಾ ಸಂಸ್ಥೆ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿತ್ತು. ಆದರೆ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ, ಕೇಜ್ರಿವಾಲ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.

==

ನರಮೇಧ: ಹಸೀನಾ ವಿರುದ್ಧ ಅಂ.ರಾ. ಕ್ರಿಮಿನಲ್‌ ಕೋರ್ಟ್‌ಗೆ ದೂರು

ಢಾಕಾ: ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಮೀಸಲು ವಿರೋಧಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನರಮೇಧ ನಡೆಸಿ ಮಾನವೀಯತೆಯ ವಿರುದ್ಧ ಅಪರಾಧವೆಸಗಿದ್ದಾರೆ ಎಂದು ಆರೋಪಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ದೂರು ಸಲ್ಲಿಸಲಾಗಿದೆ.ಪ್ರತಿಭಟನೆಯ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ವಿದ್ಯಾರ್ಥಿಯೋರ್ವನ ತಂದೆಯ ಪರವಾಗಿ ಸುಪ್ರೀಂ ಕೋರ್ಟ್‌ನ ವಕೀಲರು ಈ ದೂರು ಸಲ್ಲಿಸಿದ್ದು, ತನಿಖೆ ಪ್ರಾರಂಭವಾಗಿದೆ ಎಂದು ಸಂಸ್ಥೆಯ ಉಪ ನಿರ್ದೇಶಕ ಅತಾಯುರ್‌ ರಹಮಾನ್‌ ಹೇಳಿದ್ದಾರೆ.

ಜು.1ರಿಂದ ಆ.5ರ ವರೆಗೆ ನಡೆದ ಕೊಲೆಗಳ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಮಾಡಲಾಗುವುದು ಎಂದು ಮಧ್ಯಂತರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಈ ದೂರು ದಾಖಲಾಗಿದೆ.

==

ಹಿಮಾಚಲದಿಂದ ಸೋತಿದ್ದ ಸಿಂಘ್ವಿಗೆ ತೆಲಂಗಾಣದಿಂದ ರಾಜ್ಯಸಭೆಗೆ ‘ಕೈ’ ಟಿಕೆಟ್‌

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಸ್ಪರ್ಧಿಸಿ ಸೋತಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರನ್ನು ತೆಲಂಗಾಣದ ರಾಜ್ಯಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ನೀಡಿದೆ.ತೆಲಂಗಾಣದಲ್ಲಿ ಬಿಆರ್‌ಎಸ್‌ನ ಕೆ.ಕೇಶವ ರಾವ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಿಂಘ್ವಿ ಸ್ಪರ್ಧಿಸಲಿದ್ದಾರೆ.

ಫೆಬ್ರವರಿಯಲ್ಲಿ ಹಿಮಾಚಲದಲ್ಲಿ ನಡೆದ ರಾಜ್ಯಸಭೆ ಚುನಾವಣೆಗೆ ಅಭಿಷೇಕ್ ಸಿಂಘ್ವಿ ಸ್ಪರ್ಧಿಸಿದ್ದರು. ಆದರೆ ಆಡಳಿತ ಕಾಂಗ್ರೆಸ್‌ ಪಕ್ಷದ 6 ಶಾಸಕರ ಅಡ್ಡ ಮತದಾನದಿಂದಾಗಿ ಸೋತಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವ ಕಾರಣ ಸಿಂಘ್ವಿ ಗೆಲುವು ನಿಶ್ಚಿತ ಎಂದು ಹೇಳಲಾಗಿದೆ. ಇವರು 1872 ಕೋಟಿ ರು. ಆಸ್ತಿ ಹೊಂದಿದ್ದಾರೆ.