ಸೌರ ವಿದ್ಯುತ್ ಒಪ್ಪಂದಗಳಲ್ಲಿ ಅಧಿಕಾರಿಗಳಿಗೆ ಲಂಚ ಆರೋಪ ಆಧಾರ ರಹಿತ : ಅದಾನಿ ಗ್ರೂಪ್‌

| Published : Nov 22 2024, 01:16 AM IST / Updated: Nov 22 2024, 04:39 AM IST

ಸಾರಾಂಶ

ಸೌರ ವಿದ್ಯುತ್ ಒಪ್ಪಂದಗಳಲ್ಲಿ ಅನುಕೂಲವಾಗುವಂತೆ ಕೆಲ ಅಧಿಕಾರಿಗಳಿಗೆ ಲಂಚ ನೀಡಿರುವ ಬಗ್ಗೆ ತನ್ನ ಮೇಲೆ ಮಾಡಲಾಗಿರುವ ಆರೋಪಗಳನ್ನು ತಳ್ಳಿಹಾಕಿರುವ ಅದಾನಿ ಸಮೂಹ, ಅವುಗಳನ್ನು ಆಧಾರ ರಹಿತ ಎಂದಿದೆ.

ನವದೆಹಲಿ: ಸೌರ ವಿದ್ಯುತ್ ಒಪ್ಪಂದಗಳಲ್ಲಿ ಅನುಕೂಲವಾಗುವಂತೆ ಕೆಲ ಅಧಿಕಾರಿಗಳಿಗೆ ಲಂಚ ನೀಡಿರುವ ಬಗ್ಗೆ ತನ್ನ ಮೇಲೆ ಮಾಡಲಾಗಿರುವ ಆರೋಪಗಳನ್ನು ತಳ್ಳಿಹಾಕಿರುವ ಅದಾನಿ ಸಮೂಹ, ಅವುಗಳನ್ನು ಆಧಾರ ರಹಿತ ಎಂದಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸಮೂಹದ ವಕ್ತಾರ, ‘ಅಮೆರಿಕದ ನ್ಯಾಯಾಂಗ ಇಲಾಖೆ ಹಾಗೂ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್, ಸಾಗರ್‌ ಅದಾನಿ ಸೇರಿದಂತೆ ಅದಾನಿ ಗ್ರೀನ್‌ನ ನಿರ್ದೇಶಕರ ಮೇಲೆ ಮಾಡಿರುವ ಎಲ್ಲಾ ಆರೋಪಗಳೂ ಆಧಾರರಹಿತ. ನಾವು ಎಲ್ಲಾ ಕಾನೂನುಗಳಿಗೆ ಬದ್ಧವಾಗಿದ್ದೇವೆ. ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲಾ ಕಾನೂನಿನ ನೆರವುಗಳನ್ನು ಪಡೆಯುತ್ತೇವೆ’ ಎಂದರು.

ಅಂತೆಯೇ, ‘ಅದಾನಿ ಸಮೂಹವು ಸದಾ ಉತ್ತಮ ಆಡಳಿತ, ಪಾರದರ್ಶಕತೆ ಹಾಗೂ ಕಾನೂನುಪಾಲನೆಗೆ ಬದ್ಧವಾಗಿದೆ. ಆರೋಪಗಳು ಸಾಬೀತಾಗುವ ತನಕ ನಿರಪರಾಧಿಗಳೆಂದೇ ಪರಿಗಣಿಸಲಾಗುತ್ತದೆ. ನಾವು ಎಲ್ಲಾ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದೇವೆ ಎಂದು ನಮ್ಮ ಮಧ್ಯಸ್ಥಗಾರರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ಭರವಸೆ ನೀಡುತ್ತೇವೆ’ ಎಂದರು.

ಅದಾನಿ ಸಮೂಹ ಜೊತೆಗಿನ ಕೀನ್ಯಾದ ಎಲ್ಲಾ ಒಪ್ಪಂದ ರದ್ದು

ನೈರೋಬಿ: ಅದಾನಿ ಸಮೂಹದ ವಿರುದ್ಧ ಅಮೆರಿಕ ಲಂಚದ ಆರೋಪ ಹೊರಿಸಿದ ಬೆನ್ನಲ್ಲೇ ತನ್ನ ದೇಶದ ಪ್ರಮುಖ ವಿಮಾನ ನಿಲ್ದಾಣದ ನಿಯಂತ್ರಣವನ್ನು ಸಮೂಹಕ್ಕೆ ಒಪ್ಪಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೋ ಘೋಷಿಸಿದ್ದಾರೆ. ಅಂತೆಯೇ, ವಿದ್ಯುತ್ ಪ್ರಸರಣ ಲೈನ್‌ ನಿರ್ಮಾಣಕ್ಕಾಗಿ ಕಳೆದ ತಿಂಗಳು 736 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ 30 ವರ್ಷದ ಅವಧಿಗೆ ಇಂಧನ ಸಚಿವಾಲಯ ಅದಾನಿ ಸಮೂಹದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನೂ ರದ್ದುಗೊಳಿಸುವಂತೆ ಸೂಚಿಸಿದ್ದಾರೆ. ಈ ಕುರಿತು ಮಾತನಾಡಿದ ರುಟೋ, ‘ತನಿಖಾ ಸಂಸ್ಥೆಗಳು ಹಾಗೂ ಪಾಲುದಾರ ದೇಶಗಳಿಂದ ದೊರೆತ ಮಾಹಿತಿಯನ್ನಾಧರಿಸಿ ಪ್ರಸ್ತುತ ಅದಾನಿ ಸಮೂಹದೊಂದಿಗಿನ ಎಲ್ಲಾ ಒಪ್ಪಂದಗಳನ್ನು ಕೂಡಲೇ ರದ್ದುಗೊಳಿಸುವಂತೆ ಸಾರಿಗೆ, ಇಂಧನ ಹಾಗೂ ಪೆಟ್ರೋಲಿಯಂ ಇಲಾಖೆಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ ₹2 ಲಕ್ಷ ಕೋಟಿ ಕುಸಿತ!

ಮುಂಬೈ: ಅದಾನಿ ಸಮೂಹದ ವಿರುದ್ಧ ಅಮೆರಿಕ ಲಂಚದ ಆರೋಪ ಮಾಡಿದ ಬೆನ್ನಲ್ಲೇ, ಭಾರತೀಯ ಷೇರುಪೇಟೆಯಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರು ಬೆಲೆ ಭಾರೀ ಕುಸಿತ ಕಂಡಿದೆ. ಪರಿಣಾಮ ಸಮೂಹದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ಒಂದೆ ದಿನ 2.19 ಲಕ್ಷ ಕೋಟಿ ರು.ನಷ್ಟು ಕರಗಿ ಹೋಗಿದೆ. ಅದಾನಿ ಎಂಟರ್‌ಪ್ರೈಸಸ್‌ ಷೇರು ಮೌಲ್ಯ ಶೇ.22.61, ಅದಾನಿ ಎನರ್ಜಿ ಶೇ.20, ಅದಾನಿ ಗ್ರೀನ್‌ ಎನರ್ಜಿ ಶೇ.18.80, ಅದಾನಿ ಪೋರ್ಟ್‌ ಶೇ.13.53, ಅಂಬುಜಾ ಸಿಮೆಂಟ್‌ ಶೇ.11.98, ಅದಾನಿ ಟೋಟಲ್‌ ಗ್ಯಾಸ್‌ ಶೇ.10.40ನಷ್ಟು ಕುಸಿತ ಕಂಡಿವೆ.

₹50 ಸಾವಿರ ಕೋಟಿ ಮೌಲ್ಯದ ಬಾಂಡ್‌ ರದ್ದು

ಅಮೆರಿಕದ ಕಾನೂನು ಇಲಾಖೆಯ ವರದಿ ಬೆನ್ನಲ್ಲೇ ಅದಾನಿ ಗ್ರೀನ್‌ ಎನರ್ಜಿ ಲಿ. ಕಂಪನಿ ಬಿಡುಗಡೆ ಮಾಡಿದ್ದ ಸುಮಾರು 50,000 ಕೋಟಿ ರು. ಮೌಲ್ಯದ ಬಾಂಡ್‌ಗಳನ್ನು ರದ್ದುಪಡಿಸಿದೆ. ಈ ಬಾಂಡ್‌ಗಳು ಮೂಲ ಬೆಲೆಗಿಂತ ಮೂರು ಪಟ್ಟು ಅಧಿಕ ದರಕ್ಕೆ ಮಾರಾಟವಾಗಿದ್ದವು.