ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹಿಂದಿಕ್ಕಿ ಗೌತಮ್ ಅದಾನಿ ಮತ್ತೆ ಭಾರತದ ನಂ.1 ಶ್ರೀಮಂತ

| Published : Aug 30 2024, 01:06 AM IST / Updated: Aug 30 2024, 05:14 AM IST

ಸಾರಾಂಶ

ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿಯನ್ನು ಹಿಂದಿಕ್ಕಿ ಅದಾನಿ ಸಮೂಹದ ಕಂಪನಿಗಳ ಮುಖ್ಯಸ್ಥ ಗೌತಮ್‌ ಅದಾನಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಹುರೂನ್‌ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 11.6 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಅದಾನಿ ಮೊದಲ ಸ್ಥಾನದಲ್ಲಿದ್ದಾರೆ.

 ಮುಂಬೈ :  ಭಾರತದ ನಂ.1 ಶ್ರೀಮಂತ ವ್ಯಕ್ತಿಯಾಗಿದ್ದ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿಯನ್ನು ಹಿಂದಿಕ್ಕಿ ಅದಾನಿ ಸಮೂಹದ ಕಂಪನಿಗಳ ಮುಖ್ಯಸ್ಥ ಗೌತಮ್‌ ಅದಾನಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಹುರೂನ್‌ ಇಂಡಿಯಾ ಶ್ರೀಮಂತರ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಅದರಲ್ಲಿ ಹಿಂಡನ್‌ಬರ್ಗ್‌ ವರದಿಯಿಂದ ಆದ ನಷ್ಟವನ್ನು ತುಂಬಿಕೊಂಡು ಅದಾನಿ 11.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ನಂ.1 ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೇರಿದ್ದಾರೆ. 10.14 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮುಕೇಶ್‌ ಅಂಬಾನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

2024ರಲ್ಲಿ ಅದಾನಿ ಆಸ್ತಿ ಶೇ.95ರಷ್ಟು ಏರಿಕೆಯಾಗಿದೆ. ಅಂಬಾನಿ ಆಸ್ತಿ ಶೇ.25ರಷ್ಟು ಏರಿಕೆಯಾಗಿದೆ. 2023ರಲ್ಲಿ ಅದಾನಿ ಆಸ್ತಿ ಶೇ.57ರಷ್ಟು ಕುಸಿದು 4.74 ಲಕ್ಷ ಕೋಟಿ ರು.ಗೆ ಇಳಿದಿತ್ತು. ಅಂಬಾನಿ ಆಸ್ತಿ 2023ರಲ್ಲಿ 8.08 ಲಕ್ಷ ಕೋಟಿ ರು. ಇತ್ತು. ಆ ಅಂಕಿಅಂಶಗಳು 2024ರಲ್ಲಿ ತಲೆಕೆಳಗಾಗಿವೆ.

3.14 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಎಚ್‌ಸಿಎಲ್‌ ಸಮೂಹದ ಶಿವ ನಡಾರ್‌ 3ನೇ ಸ್ಥಾನ, 2.89 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ ಸೈರಸ್‌ ಪೂನಾವಾಲಾ 4ನೇ ಸ್ಥಾನ ಹಾಗೂ ಸನ್‌ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್‌ ಶಾಂಘ್ವಿ 2.5 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಭಾರತದ 5ನೇ ಶ್ರೀಮಂತನ ಸ್ಥಾನ ಪಡೆದಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿ ಶಾರುಖ್‌ ಖಾನ್‌: ಹುರೂನ್‌ ಇಂಡಿಯಾದ ಶ್ರೀಮಂತರ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ನಟ ಶಾರುಖ್‌ ಖಾನ್‌ ಇದೇ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ 7300 ಕೋಟಿ ರು. ಆಗಿದೆ.