ಸಾರಾಂಶ
ಮಾಲ್ಡಾ (ಪ.ಬಂಗಾಳ): ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕೆಲ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ ಎಂದು ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ಯಾತ್ರೆಯು ಬಿಹಾರದಿಂದ ಬಂಗಾಳಕ್ಕೆ ಪ್ರವೇಶಿಸುತ್ತಿದ್ದ ವೇಳೆ ಘಟನೆ ನಡೆದಿದ್ದು, ವಾಹನದ ಹಿಂಬದಿ ಕಿಟಕಿ ಗಾಜು ಜಖಂಗೊಂಡಿದೆ. ಈ ವೇಳೆ ರಾಹುಲ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯ ವೇಳೆ ಉತ್ಸಾಹದಿಂದ ಕಾರಿನ ಮೇಲೆ ಜೋರಾಗಿ ಹತ್ತಿ ಸಂಭ್ರಮಿಸಲು ಯತ್ನಿಸಿದ ವೇಳೆ ಕಾರಿಗೆ ಬ್ರೇಕ್ ಹಾಕಲಾಯಿತು.
ಆಗ ಕಾರಿನ ಗಾಜು ಪುಡಿಯಾಗಿದೆ ಎಂಬ ಇನ್ನೊಂದು ವಾದವೂ ಕೇಳಿಬಂದಿದೆ.ರಾಹುಲ್ ಕಾರಿಗೆ ಹಾನಿಯಾಗಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ರಾಹುಲ್ ಕಾರಿನ ಮೇಲೆ ದಾಳಿ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ ಅಲ್ಲ. ಬಿಹಾರದ ಕಟಿಹಾರ್‌ನಲ್ಲಿ ಘಟನೆ ನಡೆದಿದೆ’ ಎಂದಿದ್ದಾರೆ.