ಸಾರಾಂಶ
ಶಾಲಾ ಪರೀಕ್ಷೆ ಕಾರಣ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೊ ನ್ಯಾಯ ಯಾತ್ರೆಗೆ ಸಾರ್ವಜನಿಕ ಸಮಾವೇಶ ನಡೆಸಲು ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ಟಿಎಂಸಿ ಸಂಸದ ಶಂತಾನು ಸೇನ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಈ ಕುರಿತು ಆರೋಪ ಮಾಡಿದ್ದರು.
ಸಿಲಿಗುರಿ: ಅಸ್ಸಾಂನಂತೆ ಪಶ್ಚಿಮ ಬಂಗಾಳದಲ್ಲೂ ಸಹ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕೆಲವು ಪ್ರದೇಶಗಳಲ್ಲಿ ಅನುಮತಿ ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಾವು ಪಶ್ಚಿಮ ಬಂಗಾಳದಲ್ಲಿ ಹಲವು ಸ್ಥಳಗಳಲ್ಲಿ ಬಹಿರಂಗ ಸಮಾವೇಶವನ್ನು ಯೋಜಿಸಲು ತೀರ್ಮಾನಿಸಿದ್ದೆವು.
ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸುತ್ತಿದೆ.
ಹಲವು ಕಡೆಗಳಲ್ಲಿ ರಸ್ತೆಯನ್ನು ನಿರ್ಬಂಧಿಸಿ ಮುಂದೆ ಸಾಗದಂತೆ ತಡೆಯಲಾಗುತ್ತಿದೆ. ಅಸ್ಸಾಂನಂತೆ ನಾವು ಪ.ಬಂಗಾಳದಲ್ಲೂ ಯಾತ್ರೆಗೆ ಅಡ್ಡಿಪಡಿಸಲಾಗುತ್ತಿದೆ’ ಎಂದು ಕಿಡಿ ಕಾರಿದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ, ಮೈತ್ರಿ ಏನಿದ್ದರೂ ಬೇರೆ ರಾಜ್ಯದಲ್ಲಿ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಶಾಸಕ ಶಂತಾನು ಸೇನ್, ‘ಪಶ್ಚಿಮ ಬಂಗಾಳ ಸರ್ಕಾರ ರಾಜಕೀಐ ಪೂರ್ವಾಗ್ರಹದಿಂದ ಕೆಲಸ ಮಾಡುವುದಿಲ್ಲ. ಹಲವು ಪ್ರತಿಪಕ್ಷಗಳು ಈ ರಾಜ್ಯದಲ್ಲಿ ಸಮಾವೇಶವನ್ನು ನಡೆಸಲು ಅನುಮತಿ ನೀಡಲಾಗಿದೆ.
ಪ್ರಸ್ತುತ ರಾಜ್ಯದ ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಕಾರಣ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆಯೇ ಹೊರತು ಮತ್ತಾವುದೇ ಕಾರಣದಿಂದಲ್ಲ’ ಎಂದು ತಿರುಗೇಟು ನೀಡಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಅಸ್ಸಾಂ ಚರಣವನ್ನು ಮುಗಿಸಿ ಗುರುವಾರ ಪಶ್ಚಿಮ ಬಂಗಾಳದ ಸಿಲಿಗುರಿಯನ್ನು ಪ್ರವೇಶಿಸಿದೆ.
ಇಲ್ಲಿ ಎರಡು ದಿನಗಳ ವಿರಾಮದ ನಂತರ ಜ.28ರ ನಂತರ ಮತ್ತೆ ಯಾತ್ರೆ ಮುಂದುವರೆಯುತ್ತದೆ.