ಸಾರಾಂಶ
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂದ ಸರ್ಕಾರ ಅದಕ್ಕೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅಧೀರ್ ‘ಬಾಲಾಕೋಟ್‌ನಲ್ಲಿ ಭಾರತವು ಯಾವುದೇ ಮಹತ್ವದ ಗುರಿಯನ್ನು ಮುಟ್ಟಲಿಲ್ಲ ಅಥವಾ ಉಗ್ರರನ್ನು ಮಟ್ಟ ಹಾಕಿಲ್ಲ ಎಂದು ವಿವಿಧ ಸ್ವತಂತ್ರ ಸಂಘಟನೆಗಳು ಹೇಳಿಕೊಂಡಿವೆ.
ಬಾಲಾಕೋಟ್ ದಾಳಿ ಬಗ್ಗೆ ಯಾವುದೇ ಸಾಕ್ಷಿಯನ್ನು ಸರ್ಕಾರ ಹಂಚಿಕೊಂಡಿಲ್ಲ’ ಎಂದಿದ್ದಾರೆ. 2019ರಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರಿದ್ದ ವಾಹನದ ಮೇಲೆ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 40 ಸೈನಿಕರು ಮೃತಪಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿ ಉಗ್ರರ ನೆಲೆಯನ್ನು ಧ್ವಂಸ ಮಾಡಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಅಂದಿನಿಂದಲೂ ಬಾಲಾಕೋಟ್ ದಾಳಿ ಬಗ್ಗೆ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸುತ್ತಲೇ ಇದೆ.