ತಾರಾ ಜೋಡಿಯಾದ ಅದಿತಿ ರಾವ್ ಹೈದರಿ - ಸಿದ್ಧಾರ್ಥ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮ

| Published : Sep 17 2024, 12:45 AM IST / Updated: Sep 17 2024, 05:01 AM IST

ಸಾರಾಂಶ

ತಾರಾ ಜೋಡಿಯಾದ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಸೋಮವಾರ ವಿವಾಹವಾದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಹೈದರಾಬಾದ್‌: ತಾರಾ ಜೋಡಿಯಾದ ಅದಿತಿ ರಾವ್‌ ಹೈದರಿ ಮತ್ತು ಸಿದ್ಧಾರ್ಥ್‌ ಅವರು ಹಲವು ತಿಂಗಳುಗಳ ಪ್ರೇಮದ ಬಳಿಕ ಸೋಮವಾರ ವಿವಾಹವಾದರು.

ತೆಲಂಗಾಣದ ವಾನಪರ್ತಿ ಎಂಬಲ್ಲಿನ 400 ವರ್ಷ ಹಳೆಯ ದೇವಾಲಯದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಹಾಜರಿದ್ದರು. ಈ ಕುರಿತು ಇಬ್ಬರೂ ತಮ್ಮ ಇನ್‌ಸ್ಟಾ ಖಾತೆಯಲ್ಲಿ ವಿವಾಹದ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

2021ರ ತೆಲುಗು ಚಲನಚಿತ್ರ ‘ಮಹಾ ಸಮುದ್ರಂ’ನಲ್ಲಿ ಜೊತೆಯಾಗಿ ನಟಿಸಿದ್ದರು. ಇತ್ತೀಚೆಗೆ ಅದಿತಿ ನೆಟ್‌ಫ್ಲಿಕ್ಸ್‌ ಸರಣಿ ‘ಹೀರಾಮಂಡಿ..’, ಮತ್ತು ಸಿದ್ಧಾರ್ಥ್‌ ‘ಇಂಡಿಯನ್‌ 2’ ಚಿತ್ರದಲ್ಲಿ ನಟಿಸಿದ್ದರು. ಇಬ್ಬರೂ ಕಳೆದ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

==

ಇನ್ನೂ ಪೆಟ್ರೋಲ್ ಬೆಲೆ ಇಳಿಕೆ ಏಕೆ ಇಲ್ಲ?: ಖರ್ಗೆ ಪ್ರಶ್ನೆ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸದೇ ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ ಹಾಗೂ ಬೆಲೆ ಏರಿಕೆ ತಿರಸ್ಕರಿಸಿ ಬಿಜೆಪಿಯನ್ನು ಸೋಲಿಸಿ ಚುನಾವಣೆ ಇರುವ ರಾಜ್ಯಗಳಿಗೆ ಕರೆ ನೀಡಿದ್ದಾರೆ.‘2014ರ ಮೇ 16ರಂದು ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 107.49 ಡಾಲರ್‌ ಇತ್ತು. ಆಗ ಪೆಟ್ರೋಲ್‌ 71.51 ರು. ಹಾಗೂ ಡೀಸೆಲ್‌ 57.28 ರು. ಇತ್ತು. 2024ರ ಸೆ.16ರಂದು ಪ್ರತಿ ಬ್ಯಾರಲ್‌ ಕಚ್ಚಾ ತೈಲಕ್ಕೆ 72.48 ಡಾಲರ್‌ಗೆ ಇಳಿದಿದೆ. ಆದರೆ ಪೆಟ್ರೋಲ್‌ 94.72 ರು. ಹಾಗೂ ಡೀಸೆಲ್‌ 87.62 ರು. ಇದೆ. ವಾಸ್ತವವಾಗಿ ಪೆಟ್ರೋಲ್‌ 48.27 ರು. ಹಾಗೂ ಡೀಸೆಲ್‌ 69.00 ರು.ಗೆ ಲಭ್ಯವಾಗಬೇಕಿತ್ತು’ ಎಂದಿದ್ದಾರೆ.

ಅಲ್ಲದೆ, ಸರ್ಕಾರ 10 ವರ್ಷ ಮತ್ತು 100 ದಿನಗಳಲ್ಲಿ ಇಂಧನ ತೆರಿಗೆ ಮೂಲಕ 35 ಲಕ್ಷ ಕೋಟಿ ರು. ಸುಲಿಗೆ ಮಾಡಿದೆ ಎಂದು ಆರೋಪಿಸಿದ್ದಾರೆ.

==

ಸದ್ಯದ ಸ್ಥಿತಿಯಲ್ಲಿ ದೇಶದಲ್ಲಿ ಏಕ ಚುನಾವಣೆ ಅಸಾಧ್ಯ: ಕಾಂಗ್ರೆಸ್‌

ಚಂಡೀಗಢ: ‘ಸದ್ಯ ಇರುವ ಪರಿಸ್ಥಿತಿಯಲ್ಲಿ ಒಂದು ದೇಶ ಒಂದು ಚುನಾವಣೆ ಕಾನೂನು ಜಾರಿಗೆ ತರಲು ಸಾಧ್ಯವಿಲ್ಲ. ಮಸೂದೆ ಜಾರಿಗೆ ತರಬೇಕಾದರೆ ಕನಿಷ್ಟ 5 ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ’ ಎಂದು ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ದೇಶದಲ್ಲಿ ಏಕ ಚುನಾವಣೆ ಜಾರಿಗೆ ತರಲು ಹೊರಟಿರುವ ಎನ್‌ಡಿಎ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಚಿದಂಬರಂ, ‘ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಪ್ರಸ್ತುತ ಅವಧಿಯಲ್ಲಿ ಜಾರಿಗೊಳಿಸುವಷ್ಟು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸಂಖ್ಯಾಬಲವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ, ಇದಕ್ಕೆ ಕನಿಷ್ಠ 5 ಸಾಂವಿಧಾನಿಕ ತಿದ್ದುಪಡಿಗಳಾಗಬೇಕು. ಏಕ ಚುನಾವಣೆ ದೇಶದಲ್ಲಿ ಅತಿದೊಡ್ಡ ಸಾಂವಿಧಾನಿಕ ಅಡೆತಡೆ. ಇಂಡಿಯಾ ಮೈತ್ರಿ ಕೂಡ ಇದನ್ನು ವಿರೋಧಿಸುತ್ತದೆ’ ಎಂದರು.

==

ಪೊಲಿಯೋ ಲಸಿಕೆಗೆ ತಡೆ: ತಾಲಿಬಾನ್‌ ಫರ್ಮಾನು

ದುಬೈ: ಆಫ್ಘಾನಿಸ್ತಾನದಲ್ಲಿ ಅಧಿಕಾರ ಕೈಗೆತ್ತಿಕೊಂಡ ಬಳಿಕ ವಿವಾದಾತ್ಮಕ ಕಾನೂನುಗಳಿಂದ ಸುದ್ದಿಯಲ್ಲಿರುವ ತಾಲಿಬಾನಿಗಳು, ಇದೀಗ ಪೋಲಿಯೋ ಲಸಿಕೆ ಅಭಿಯಾನಕ್ಕೆ ತಡೆ ಒಡ್ಡಿದ್ದಾರೆ.ಸೆಪ್ಟೆಂಬರ್‌ನಲ್ಲಿ ಪಲ್ಸ್‌ ಪೊಲಿಯೋ ಅಭಿಯಾನ ಆರಂಭ ಆಗಬೇಕಿದೆ. ಆದರೆ ಇದಕ್ಕೆ ತಡೆ ಒಡ್ಡಿದ್ದಾಗಿ ನಮಗೆ ತಾಲಿಬಾನ್‌ ತಿಳಿಸಿದೆ. ಇದಕ್ಕೆ ನಾಯಕರು ಇದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಅಂದಹಾಗೆ ಈ ವರ್ಷ ಈವರೆಗೆ ಆಫ್ಘಾನಿಸ್ತಾನದಲ್ಲಿ 18 ಪೋಲಿಯೋ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. 2023ರಲ್ಲಿ 6 ಪೋಲಿಯೋ ಪ್ರಕರಣಗಳು ಪತ್ತೆಯಾಗಿದ್ದವು.ಪಾಕಿಸ್ತಾನದಲ್ಲಿ ಪಲ್ಸ್‌ ಪೊಲಿಯೋ ಮೂಲಕ ಪಾಶ್ಚಿಮಾತ್ಯರು ಸಂತಾನಹರಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಉಗ್ರರು ದಾಳಿ ನಡೆಸುತ್ತಿದ್ದರು. ಇದೀಗ ಆಫ್ಘಾನಿಸ್ತಾನ ಕೂಡ ಅದೇ ದಾರಿ ಹಿಡಿದಿದೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳು ಪೊಲಿಯೋ ನಿಗ್ರಹದಲ್ಲಿ ವಿಫಲವಾಗಿವೆ.

==

82988 ಸೆನ್ಸೆಕ್ಸ್‌, 25383 ಅಂಕಕ್ಕೆ ನಿಫ್ಟಿ: ಸಾರ್ವಕಾಲಿಕ ದಾಖಲೆ

ಮುಂಬೈ: ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 97 ಅಂಕ ಏರಿಕೆಯಾಗಿದ್ದು 82,988 ಅಂಕಕ್ಕೆ ತಲುಪಿದೆ. ಅದೇ ರೀತಿ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 27 ಅಂಕ ಏರಿಕೆಯಾಗಿ 25,383 ಅಂಕಕ್ಕೆ ತಲುಪಿದೆ. ಎರಡೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿವೆ.ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ 293 ಅಂಕ ಏರಿಕೆಯಾಗಿ 83,184 ಅಂಕಕ್ಕೆ ತಲುಪಿತ್ತು. ಅದೇ ರೀತಿ ನಿಫ್ಟಿ 89 ಅಂಕ ಏರಿಕೆಯಾಗಿ 25,445 ಅಂಕಕ್ಕೆ ತಲುಪಿತ್ತು.

30 ಕಂಪನಿಯ ಷೇರುಗಳಲ್ಲಿ ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್, ಲಾರ್ಸೆನ್ ಆ್ಯಂಡ್‌ ಟೂಬ್ರೊ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ನೆಸ್ಲೆ, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಟಾಟಾ ಸ್ಟೀಲ್‌ನ ಷೇರುಗಳು ಲಾಭ ಗಳಿಸಿವೆ.