ಸಾರಾಂಶ
ವಯನಾಡಿನಲ್ಲಿ ಭೂಕುಸಿತದಲ್ಲಿ ಕುಟುಂಬ ಕಳೆದುಕೊಂಡಿದ್ದ ಯುವತಿಯ ಭಾವಿ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿತ್ತು.
ವಯನಾಡು: ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ತನ್ನ ಕುಟುಂಬದ 9 ಮಂದಿಯನ್ನು ಕಳೆದುಕೊಂಡಿದ್ದ ಮೆಪ್ಪಾಡಿಯ ಶ್ರುತಿ ಎನ್ನುವ ಯುವತಿಗೆ ಮತ್ತೊಂದು ಆಘಾತ ಎದುರಾಗಿದೆ.
ಆಕೆಯ ಭಾವಿ ಪತಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ. ಜು.30ರಂದು ಸಂಭವಿಸಿದ ವಯನಾಡು ದುರಂತದಲ್ಲಿ ಶ್ರುತಿ ತನ್ನ ತಂದೆ, ತಾಯಿ, ಸಹೋದರಿ ಸೇರಿದಂತೆ ಎಲ್ಲರನ್ನು ಕಳೆದುಕೊಂಡು ಅನಾಥರಾಗಿದ್ದರು. ಇದೀಗ ದುರ್ವಿಧಿ ಎನ್ನುವಂತೆ ಆಕೆಯನ್ನು ಮದುವೆಯಾಗಬೇಕಿದ್ದ ಬಾಲ್ಯದ ಗೆಳೆಯ, ಭಾವಿ ಪತಿ ಜೆನ್ಸನ್ (27) ಕೂಡ ನಿಧನರಾಗಿದ್ದಾರೆ.
ಶ್ರುತಿ, ಗೆಳೆಯ ಜೆನ್ಸನ್ ಜೊತೆ ಪುತ್ತುಮಾಲದಲ್ಲಿ ತಾಯಿ ಸಮಾಧಿಗೆ ಭೇಟಿ ನೀಡಿ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದ್ದು, ಇಬ್ಬರು ಪ್ರಯಾಣಿಸುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದ ಜೆನ್ಸನ್ ಸಾವನ್ನಪ್ಪಿದ್ದಾರೆ. ಶ್ರುತಿ ಮತ್ತು ಜೆನ್ಸಸ್ ಇದೇ ವರ್ಷ ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿಸೆಂಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.