ಢಾಕಾ: ಆಪರೇಷನ್‌ ಸಿಂದೂರದ ಸಮಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಬಳಸಿದ್ದ ಚೀನಾ ನಿರ್ಮಿತ 4ನೇ ತಲೆಮಾರಿನ ಜೆ10ಸಿಇ ಯುದ್ಧವಿಮಾನಗಳನ್ನು ಖರೀದಿಸಲು ಬಾಂಗ್ಲಾದೇಶ ಮುಂದಾಗಿದೆ. ಪ್ರತಿ ವಿಮಾನಕ್ಕೆ ಅಂದಾಜು 379 ಕೋಟಿ ರು.ವೆಚ್ಚವಾಗಲಿದ್ದು, 24 ವಿಮಾನ ಖರೀದಿ ಸಂಬಂಧ ಮುಂದಿನ ಆಗಸ್ಟ್‌ನಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲಿವೆ ಎನ್ನಲಾಗಿದೆ.

ಸದ್ಯ ಚೀನಾ ಹೊರತುಪಡಿಸಿದರೆ ಪಾಕಿಸ್ತಾನ ಮಾತ್ರ ಇಂಥ ವಿಮಾನ ಬಳಸುತ್ತಿದೆ. ಒಪ್ಪಂದದ ಬಳಿಕ ಬಾಂಗ್ಲಾದೇಶಕ್ಕೂ ಈ ಯುದ್ಧ ವಿಮಾನ ಲಭ್ಯವಾಗಲಿದೆ.

ಬಾಂಗ್ಲಾ ವಾಯುಪಡೆಗೆ ಬಲ:

ಸದ್ಯ ಬಾಂಗ್ಲಾ ವಾಯುಪಡೆ ಎಫ್‌-7 ಯುದ್ಧವಿಮಾನಗಳನ್ನು ಬಳಸುತ್ತಿದೆ. ಹೊಸತಾಗಿ ಬರಲಿರುವ 24 ಜೆ-10ಸಿಇ ಚೀನಾದ ಬಲಿಷ್ಠ ಯುದ್ಧವಿಮಾನಗಳಲ್ಲೊಂದು. ಮುಂದುವರಿದ ಎಲೆಕ್ಟ್ರಾನಿಕ್ ಸ್ಕ್ಯಾನ್ ಮಾಡಲಾದ ಅರೇ ರಾಡಾರ್ ಹಾಗೂ ಆಗಸದಿಂದ ಆಗಸ ಹಾಗೂ ಆಗಸದಿಂದ ಭೂಮಿಗೆ ದಾಳಿ ಮಾಡಬಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಮ್ಯಾಚ್‌ 1.8ರಷ್ಟು ವೇಗ ಮತ್ತು1,000 ಕಿ.ಮೀ. ದೂರ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಇದು ಬಾಂಗ್ಲಾ ವಾಯುಪಡೆಯ ಶಕ್ತಿಯನ್ನು ಬಲಪಡಿಸಲಿದೆ. ರಫ್ತು ಕುಸಿತದಿಂದ ನಷ್ಟಕ್ಕೆ ಸಿಲುಕಿರುವ ಚೀನಾಕ್ಕೂ ನೆರವು ನೀಡಲಿದೆ.