ರೈತರ ದೆಹಲಿ ಚಲೋ ಕದನ

| Published : Feb 14 2024, 02:18 AM IST / Updated: Feb 14 2024, 07:51 AM IST

ಸಾರಾಂಶ

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಪಂಜಾಬ್‌ ಮತ್ತು ಹರ್ಯಾಣದ ಸಾವಿರಾರು ರೈತರು ಮಂಗಳವಾರ ದೆಹಲಿ ಚಲೋ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.

ನವದೆಹಲಿ: ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಪಂಜಾಬ್‌ ಮತ್ತು ಹರ್ಯಾಣದ ಸಾವಿರಾರು ರೈತರು ಮಂಗಳವಾರ ದೆಹಲಿ ಚಲೋ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.

ಟ್ರ್ಯಾಕ್ಟರ್‌, ಲಾರಿ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಉಭಯ ರಾಜ್ಯಗಳಿಂದ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಈ ವೇಳೆ ಹರ್ಯಾಣ-ಪಂಜಾಬ್‌ ಗಡಿಯಲ್ಲಿ ರೈತರು-ಪೊಲೀಸರ ನಡುವೆ ಭಾರಿ ಸಂಘರ್ಷ ನಡೆದಿದೆ. 

ಸಂಘರ್ಷದಲ್ಲಿ ಕೆಲವು ಪೊಲೀಸರಿಗೆ ಹಾಗೂ ಪ್ರತಿಭಟನಾಕಾರರಿಗೆ ಗಾಯಗಳಾಗಿವೆ.ರೈತರ ರಾಜಧಾನಿ ಪ್ರವೇಶಕ್ಕೆ ಮೊದಲೇ ತಡೆಗೋಡೆಗಳನ್ನು ಅಳವಡಿಸಿ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ ಆಡಳಿತದ ಹರ್ಯಾಣ ಪೊಲೀಸರು, ರೈತರನ್ನು ಹರ್ಯಾಣ-ಪಂಜಾಬ್‌ ಗಡಿಯ ಶಂಭು, ಕನೌರಿ, ಜಿಂದ್‌ ಗಡಿಯಲ್ಲೇ ತಡೆದು ನಿಲ್ಲಿಸಿದ್ದಾರೆ. 

ಈ ವೇಳೆ ರೈತರು ತಡೆಗೋಡೆಗಳನ್ನು ಹತ್ತುವ ಮತ್ತು ಅದನ್ನು ತೆರವುಗೊಳಿಸುವ ಯತ್ನ ಮಾಡಿದ್ದಾರೆ. ಆಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಮತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಚದುರಿಸುವ ಯತ್ನ ಮಾಡಿದ್ದಾರೆ. 

ಹೀಗಾಗಿ ಉಭಯ ರಾಜ್ಯಗಳ ಗಡಿಯಲ್ಲಿ ಮಂಗಳವಾರ ಪೊಲೀಸರು ಮತ್ತು ರೈತರ ನಡುವೆ ಭಾರೀ ಸಂಘರ್ಷ ನಡೆದಿದೆ.

ಇದರ ನಡುವೆ, ಬೆಂಬಲ ಬೆಲೆಗೆ ಕಾನೂನು ರೂಪ ನೀಡುವುದು ಸದ್ಯಕ್ಕೆ ಆಗದು. ಸಮಯ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತರು ಘೋಷಿಸಿದ್ದಾರೆ.

ದಿಲ್ಲಿ ಚಲೋ- ಪಂಜಾಬ್ ಮೃದು ಧೋರಣೆ: 200 ರೈತ ಸಂಘಟನೆಗಳು ಕರೆ ನೀಡಿದ ದಿಲ್ಲಿ ಚಲೋ ಪ್ರತಿಭಟನೆ ಅನ್ವಯ ಮಂಗಳವಾರ ಬೆಳಗ್ಗೆಯಿಂದಲೇ ಪಂಜಾಬ್‌ ಮತ್ತು ಹರ್ಯಾಣದ ವಿವಿಧ ಭಾಗಗಳಿಂದ ಸಾವಿರಾರು ರೈತರು ಮಹಿಳೆಯರು, ವೃದ್ಧರೊಡಗೂಡಿ ದೆಹಲಿಯತ್ತ ಪ್ರಯಾಣ ಬೆಳೆಸಿದರು. 

ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷದ ಸರ್ಕಾರ, ಪ್ರತಿಭಟನಾಕಾರರ ಬಗ್ಗೆ ಮೃದು ಧೋರಣೆ ತೋರಿದ್ದು, ತನ್ನ ಗಡಿಯನ್ನು ತೆರವು ಮಾಡಿ ರೈತರನ್ನು ಹರ್ಯಾಣದತ್ತ ಸಾಗಲು ಬಿಟ್ಟಿದೆ. 

ಈ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರ ಪಂಜಾಬ್‌ಗೆ ಹೊಂದಿಕೊಂಡಿರುವ ಅಂಬಾಲ, ಜಿಂದ್‌, ಫತೇಬಾದ್‌, ಕುರುಕ್ಷೇತ್ರ ಮತ್ತು ಸಿರ್ಸಾ ಗಡಿಯನ್ನು ಕಾಂಕ್ರೀಟ್‌ ಬ್ಲಾಕ್‌, ಕಬ್ಬಿಣದ ಮೊಳೆಗಳು ಮತ್ತು ತಂತಿಯ ಬೇಲಿಯ ಮೂಲಕ ಮುಚ್ಚಿದೆ.

ಇದರ ಹೊರತಾಗಿಯೂ ಹರ್ಯಾಣದ ಅಂಬಾಲ ಬಳಿ ಬರುವ ಶಂಭು ಗಡಿಯಲ್ಲಿ ಹಾಕಲಾಗಿದ್ದ ತಡೆಗೋಡೆಗಳನ್ನು ತೆರೆಯಲು ರೈತರು ಹರಸಾಹಸ ಮಾಡಿದ್ದಾರೆ. 

ಶಂಭು ಗಡಿಯಲ್ಲಿನ ಮೇಲ್ಸೇತುವೆಯ ರಕ್ಷಣಾ ಗೋಡೆಗಳನ್ನು ಧ್ವಂಸ ಮಾಡಿ ಸೇತುವೆಯಿಂದ ಬ್ಯಾರಿಕೇಡ್‌ಗಳನ್ನು ರೈತರು ಕೆಳಕ್ಕೆ ಎಸೆದಿದ್ದಾರೆ. ಈ ವೇಳೆ ಕೆಲ ರೈತರನ್ನು ವಶಕ್ಕೆ ಪಡೆಯಲಾಗಿದೆ.

ಅಶ್ರುವಾಯು ಸಿಡಿಸಲು ಡ್ರೋನ್‌ ಬಳಕೆ: ಕೆಲವು ಕಡೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಜೊತೆಗೆ ಈ ಬಾರಿ ಅಶ್ರುವಾಯು ಸಿಡಿಸಲು ಮತ್ತು ಪ್ರತಿಭಟನಾಕಾರರ ಮೇಲೆ ಕಣ್ಣಿಡಲು ಪೊಲೀಸರು ಡ್ರೋನ್‌ ಸಹಾಯ ಪಡೆದುಕೊಂಡಿದ್ದಾರೆ. 

ಡ್ರೋನ್‌ ಬಳಸಿ ಪೊಲೀಸರು ಅಶ್ರುವಾಯು ಸಿಡಿಸಿದ್ದು ಇದೇ ಮೊದಲು.ಈ ನಡುವೆ ಅಶ್ರುವಾಯು ಶೆಲ್‌ನ ಪರಿಣಾಮವನ್ನು ತಡೆಯಲು ರೈತರು ಮೊದಲೇ ಗೋಣಿಚೀಲಗಳನ್ನು ಅವುಗಳ ಮೇಲೆ ಎಸೆಯುವ, ಒದ್ದೆ ಬಟ್ಟೆಗಳನ್ನು ಬಳಸುವ ಪ್ರಯೋಗ ಮಾಡಿದ್ದು ಮಂಗಳವಾರ ಕಂಡುಬಂತು. ಕೆಲವು ಪ್ರತಿಭಟನಾಕಾರರು ಹೊಗೆ ನಿರೋಧಕ ಮಾಸ್ಕ್ ಧರಿಸಿದ್ದೂ ಕಂಡುಬಂತು.

ರೈತರ ಆಕ್ರೋಶ: ಈ ನಡುವೆ ಹರ್ಯಾಣ ಸರ್ಕಾರ ರೈತರ ದಿಲ್ಲಿ ಚಲೋ ತಡೆಯಲು ಮಾಡಿರುವ ಭಾರೀ ವ್ಯವಸ್ಥೆ ಬಗ್ಗೆ ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸರವಣ್‌ ಸಿಂಗ್‌ ಪಂಧೇರ್‌ ಕಿಡಿಕಾರಿದ್ದಾರೆ. 

ಪಂಜಾಬ್‌ ಮತ್ತು ಹರ್ಯಾಣ ಗಡಿಯನ್ನು ಅಂತಾರಾಷ್ಟ್ರೀಯ ಗಡಿ ರೀತಿಯಲ್ಲಿ ಮಾರ್ಪಡಿಸಲಾಗಿದೆ. ಇಂಥ ಪ್ರಯತ್ನಗಳ ಮೂಲಕ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್‌ ಸರ್ಕಾರ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ದಿಲ್ಲಿಗೆ ಬ್ಯಾರಿಕೇಡ್‌, ಮೊಳೆ, ಕಂಟೇನರ್‌ ಭದ್ರತೆ: ಹರ್ಯಾಣ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರೆ ಸೇನಾಪಡೆಯ 64 ತುಕಡಿ ಮತ್ತು ರಾಜ್ಯ ಪೊಲೀಸ್‌ ಪಡೆಯ 50 ತುಕಡಿಗಳನ್ನು ನಿಯೋಜಿಸಿದೆ. 

ಮತ್ತೊಂದೆಡೆ ದೆಹಲಿ ಪೊಲೀಸರು ಕೂಡಾ ತಮ್ಮ ವ್ಯಾಪ್ತಿಯ ಹೆದ್ದಾರಿ, ರಸ್ತೆ ಮತ್ತು ಅಯಕಟ್ಟಿನ ಪ್ರದೇಶಗಳಲ್ಲಿ ಬಹುಸ್ತರದ ಬ್ಯಾರಿಕೇಡ್‌, ಕಾಂಕ್ರೀಟ್‌ ಬ್ಲಾಕ್‌ ಕಬ್ಬಿಣದ ಮೊಳೆ, ಕಂಟೇನರ್‌ ವಾಲ್‌ಗಳನ್ನು ಅಳವಡಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಮಾತುಕತೆಗೆ ಸಿದ್ಧಪ್ರತಿಭಟನಾನಿರತ ರೈತರ ಜತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರೈತರನ್ನು ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಿದೆ. ಅದಕ್ಕೆ ರೈತರು ಬಲಿ ಆಗಬಾರದು.- ಅರ್ಜುನ್‌ ಮುಂಡಾ, ಕೃಷಿ ಖಾತೆ ರಾಜ್ಯ ಸಚಿವ

6 ತಿಂಗಳಿಗೆ ಆಗುವಷ್ಟು ಸರಕಿನೊಂದಿಗೆ ರೈತರು

ನವದೆಹಲಿ: ಪಡಿತರ ಸೇರಿದಂತೆ 6 ತಿಂಗಳಿಗಾಗುಷ್ಟು ಸರಕಿನೊಂದಿಗೆ ರೈತರು ದೆಹಲಿಯತ್ತ ಹೊರಟಿದ್ದಾರೆ. 1500 ಟ್ರ್ಯಾಕ್ಟರ್‌ ಮತ್ತು 500 ವಾಹನಗಳನ್ನು ಸಜ್ಜುಗೊಳಿಸಿಕೊಂಡಿದ್ದಾರೆ.

 3 ವರ್ಷಗಳ ಹಿಂದೆ ದೆಹಲಿಯಲ್ಲಿ ಸುದೀರ್ಘ ಕಾಲ ನಡೆದ ರೀತಿಯಲ್ಲೇ ಮತ್ತೊಂದು ಬೃಹತ್‌ ಹೋರಾಟಕ್ಕೆ ಅವರು ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ.