ಸಾರಾಂಶ
ಬೆಂಗಳೂರು : ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪ ಬಂದಿದೆ. ಹೀಗಾಗಿ ಪ್ರಕರಣ ಸಭಾಪತಿಗಳಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಾದವೂ ಕೇಳಿ ಬಂದಿದೆ.
ಕಲಾಪ ನಡೆಯುತ್ತಿರುವಾಗ ಸದಸ್ಯರು ಯಾವ ರೀತಿ ಮಾತನಾಡಬೇಕು? ಯಾರು ಮಾತನಾಡಬೇಕು? ನಿಯಮ ಉಲ್ಲಂಘಿಸಿ ಮಾತನಾಡಿದರೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಸಭಾಪತಿಗಳಿಗೆ ಇರುತ್ತದೆ. ಆದರೆ, ಗುರುವಾರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸಿ.ಟಿ. ರವಿ ನಿಂದನೆ ಮಾಡಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ವಿಧಾನಸೌಧಕ್ಕೆ ಬಂದು ಸಭಾಪತಿಗಳಿಗೆ ಮಾಹಿತಿ ನೀಡಿ ನೇರವಾಗಿ ಸಿ.ಟಿ. ರವಿ ಅವರನ್ನು ಬಂಧಿಸಿದ್ದಾರೆ.
ಒಂದೊಮ್ಮೆ ಕಲಾಪ ನಡೆಯುತ್ತಿರುವಾಗ ಇಂತಹ ಹೇಳಿಕೆ ನೀಡಿದ್ದರೆ ಸಭಾಪತಿಗಳು ಸದಸ್ಯರ ದೂರು ಆಧರಿಸಿ ಹಕ್ಕು ಬಾಧ್ಯತಾ ಸಮಿತಿ ಅಥವಾ ನೈತಿಕ ಸಮಿತಿಗೆ ಶಿಫಾರಸು ಮಾಡುತ್ತಿದ್ದರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.