ಸ್ಪೀಡ್‌ ಬೋಟ್‌ ಡಿಕ್ಕಿ ಪ್ರಕರಣ : ಹಡಗಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಅಧಿಕ ಸಾವಿಗೆ ಕಾರಣ

| Published : Dec 20 2024, 12:45 AM IST / Updated: Dec 20 2024, 04:28 AM IST

ಸಾರಾಂಶ

ಮುಂಬೈನ ಎಲಿಫೆಂಟಾ ದ್ವೀಪದ ಬಳಿ ನೌಕಾಪಡೆಯ ಸ್ಪೀಡ್‌ ಬೋಟ್‌ ಡಿಕ್ಕಿಯಾಗಿ ಪ್ರವಾಸಿ ಹಡಗಿನಲ್ಲಿದ್ದ 13 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರವಾಸಿ ಹಗಡಗಿನಲ್ಲಿನ ಲೋಪವೊಂದು ಬಯಲಾ ಗಿದೆ

ಮುಂಬೈ: ಮುಂಬೈನ ಎಲಿಫೆಂಟಾ ದ್ವೀಪದ ಬಳಿ ನೌಕಾಪಡೆಯ ಸ್ಪೀಡ್‌ ಬೋಟ್‌ ಡಿಕ್ಕಿಯಾಗಿ ಪ್ರವಾಸಿ ಹಡಗಿನಲ್ಲಿದ್ದ 13 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರವಾಸಿ ಹಗಡಗಿನಲ್ಲಿನ ಲೋಪವೊಂದು ಬಯಲಾಗಿದೆ. ಇದರಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕರೆದೊಯ್ಯಲಾಗುತ್ತಿತ್ತು. ಇದು ಸಾವು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

‘ನೀಲ್‌ಕಮಲ್‌’ ಹಡಗಲ್ಲಿ 90 ಜನರನ್ನು ಮಾತ್ರ (84 ಪ್ರಯಾಣಿಕರು, 6 ಸಿಬ್ಬಂದಿ) ತುಂಬಿಸುವ ಸಾಮರ್ಥ್ಯವಿತ್ತು. ಆದರೆ 100ಕ್ಕೂ ಹೆಚ್ಚು ಪ್ರವಾಸಿಗರನ್ನು ಅದರಲ್ಲಿ ತುಂಬಿಸಲಾಗಿತ್ತು. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿಸಿದ್ದರಿಂದ ನೌಕಾ ಪಡೆಯ ಬೋಟ್‌ ಡಿಕ್ಕಿಯಾದಾಗ ಕೆಳಭಾಗದಲ್ಲಿ ಪ್ರಯಾಣಿಕರು ಸಾವನ್ನಪ್ಪಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾವಿನ ಸಂಖ್ಯೆ 14ಕ್ಕೇರಿಕೆ

ಮುಂಬೈ: ಮುಂಬೈನ ಎಲಿಫೆಂಟಾ ದ್ವೀಪದ ಬಳಿ ಎಂಜಿನ್ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದ ನೌಕಾ ಪಡೆಯ ಸ್ಪೀಡ್‌ ಬೋಟ್‌ , ಪ್ರವಾಸಿಗರಿದ್ದ ಹಡಗಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆ ಯಾಗಿದೆ. ನಾಪತ್ತೆಯಾಗಿರುವ ಮತ್ತೊಬ್ಬರಿಗೆ ಶೋಧ ಮುಂದುವರೆದಿದೆ.

ಪ್ರವಾಸಿಗರ ಸಂಖ್ಯೆ ಇಳಿಮುಖ: ಗೇಟ್‌ವೇ ಆಫ್‌ ಇಂಡಿಯಾ ನೋಡಲು ಬರುವ ಹೆಚ್ಚಿನ ಪ್ರವಾಸಿಗರು ಎಲಿಫೆಂಟಾ ದ್ವೀಪಕ್ಕೆ ದೋಣಿ ವಿಹಾರ ನಡೆಸುತ್ತಿದ್ದರು. ಆದರೆ ಬುಧವಾರ ನೀಲ್‌ಕಲಮ್ ದುರಂತದ ಬಳಿಕ ಈ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಮುಂಬೈ ಹಡಗು ದುರಂತ: ದೋಣಿ ವಿಹಾರಕ್ಕೆ ಲೈಫ್‌ ಜಾಕೆಟ್‌ ಕಡ್ಡಾಯ

ಮುಂಬೈ: ಮುಂಬೈನ ಎಲಿಫೆಂಟಾ ದ್ವೀಪದ ಬಳಿ ಸಂಭವಿಸಿದ ಸ್ಪೀಡ್ ಬೋಟ್‌ ದುರಂತದಲ್ಲಿ 13 ಪ್ರವಾಸಿಗರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇನ್ನು ಮುಂದೆ ಗೇಟ್‌ವೇ ಆಫ್‌ ಇಂಡಿಯಾದಿಂದ ದೋಣಿ ವಿಹಾರಕ್ಕೆ ಲೈಫ್‌ ಜಾಕೆಟ್‌ ಬಳಸುವುದನ್ನು ಕಡ್ಡಾಯಗೊಳಿಸಿ ಅಧಿಕಾರಿಗಳು ಆದೇಶಿಸಿದ್ದಾರೆ.

ಬುಧವಾರ ದುರಂತದಲ್ಲಿ ಬದುಕುಳಿದ ಕೆಲವರು ದೋಣಿಯಲ್ಲಿ ಸಾಕಷ್ಟು ಲೈಫ್‌ ಜಾಕೆಟ್‌ಗಳು ಇದ್ದಿರಲಿಲ್ಲ ಎಂದಿದ್ದರು. ಈ ಬೆನ್ನಲ್ಲೇ, ಲೈಫ್‌ ಜಾಕೆಟ್‌ ಕಡ್ಡಾಯಗೊಳಿಸಲಾಗಿದೆ.

 ಈ ಬಗ್ಗೆ ಗೇಟ್‌ವೇ ಆಫ್‌ ಇಂಡಿಯಾದಲ್ಲಿ ನಿಯೋಜಿತವಾಗಿರುವ ಸಹಾಯಕ ಬೋಟ್‌ ಇನ್ಸ್‌ಪೆಕ್ಟರ್‌ ದೇವಿದಾಸ್‌ ಜಾಧವ್ ಮಾಹಿತಿ ನೀಡಿದ್ದು, ಮಾಂಡ್ವಾ ಸಮೀಪದ ಆಲಿಬಾಗ್‌, ಎಲಿಫೆಂಟಾ ದ್ವೀಪಕ್ಕೆ ವಿಹಾರವನ್ನು ಮಾಡಲು ಬಯಸುವ ಪ್ರವಾಸಿಗರು ಲೈಫ್‌ ಜಾಕೆಟ್‌ಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.