ಪ್ರವಾದಿ ಮುಹಮ್ಮದ್‌ ಪೈಗಂಬರ್‌ ವಂಶಸ್ಥ ಮುಸ್ಲಿಂ ಆಧ್ಯಾತ್ಮಿಕ ಗುರು ಅಗಾ ಖಾನ್ ನಿಧನ

| N/A | Published : Feb 06 2025, 12:17 AM IST / Updated: Feb 06 2025, 05:20 AM IST

ಸಾರಾಂಶ

ಪ್ರವಾದಿ ಮುಹಮ್ಮದ್‌ ಪೈಗಂಬರ್‌ ವಂಶಸ್ಥ, ಇಸ್ಲಾಂ ಧರ್ಮದ ಆಧ್ಯಾತ್ಮಿಕ ನಾಯಕರಾಗಿ ಜನಪ್ರಿಯತೆ ಪಡೆದಿದ್ದ ಅಗಾ ಖಾನ್ ತಮ್ಮ 88ನೇಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಪ್ಯಾರಿಸ್‌: ಪ್ರವಾದಿ ಮುಹಮ್ಮದ್‌ ಪೈಗಂಬರ್‌ ವಂಶಸ್ಥ, ಇಸ್ಲಾಂ ಧರ್ಮದ ಆಧ್ಯಾತ್ಮಿಕ ನಾಯಕರಾಗಿ ಜನಪ್ರಿಯತೆ ಪಡೆದಿದ್ದ ಅಗಾ ಖಾನ್ ತಮ್ಮ 88ನೇಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಿಯಾ ಇಸ್ಮಾಯಿಲ್ ಮುಸ್ಲಿಮರ 49ನೇ ಅನುವಂಶಿಕ ಇಮಾಮ್ ಆಗಿದ್ದ ಅಗಾ ಖಾನ್ IVಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ನಿಧನರಾದರು. 

ಈ ಬಗ್ಗೆ ಅಗಾ ಖಾನ್ ಅವರ ಅಭಿವೃದ್ಧಿ ಜಾಲ ಮತ್ತು ಇಸ್ಮಾಯಿಲಿ ಧಾರ್ಮಿಕ ಸಮುದಾಯ ಘೋಷಿಸಿದೆ. 20 ವರ್ಷದಲ್ಲಿರುವಾಗಲೇ ಮುಸ್ಲಿಮರ ಆಧ್ಯಾತ್ಮಿಕ ನಾಯಕರಾಗಿದ್ದ ಇವರು ದೇಣಿಗೆಗಳ ಮೂಲಕ ಮನೆ , ಆಸ್ಪತ್ರೆಗಳನ್ನು ನಿರ್ಮಿಸಿದ್ದರು. ಅವರ ಉತ್ತರಾಧಿಕಾರಿಯನ್ನು ಅವರ ಉಯಿಲಿನಲ್ಲಿ ಈಗಾಗಲೇ ಬರೆದಿಡಲಾಗಿದ್ದು, ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೊದಲು ಅವರ ಕುಟುಂಬ ಮತ್ತು ಧಾರ್ಮಿಕ ನಾಯಕರ ಸಮ್ಮುಖದಲ್ಲಿ ಅದನ್ನು ಓದಲಾಗುತ್ತದೆ.

ರುಪಾಯಿ ಮೌಲ್ಯ 39 ಪೈಸೆ ಕುಸಿದು 87.46ಕ್ಕೆ ಅಂತ್ಯ ಸಾರ್ವಕಾಲಿಕ ಕನಿಷ್ಠ

ಮುಂಬೈ: ವಿವಿಧ ದೇಶಗಳೊಂದಿಗೆ ಅಮೆರಿಕ ನಡೆಸಿರುವ ತೆರಿಗೆ ಸಮರ, ಬುಧವಾರವೂ ಭಾರತದ ಕರೆನ್ಸಿಯಾದ ರುಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ಇಲ್ಲಿನ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರದಲ್ಲಿ ಬುಧವಾರ ಡಾಲರ್‌ ಎದುರು ರುಪಾಯಿ ಮೌಲ್ಯ 39 ಪೈಸೆಯಷ್ಟು ಭಾರೀ ಕುಸಿತ ಕಂಡು 87.46 ರು.ನಲ್ಲಿ ಅಂತ್ಯವಾಗಿದೆ. ಇದು ಡಾಲರ್‌ ಎದುರು ರುಪಾಯಿಯ ಇದುವರೆಗಿನ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ಮಂಗಳವಾರ ರುಪಾಯಿ ಮೌಲ್ಯ 4 ಪೈಸೆಯಷ್ಟು ಚೇತರಿಕೆ ಕಂಡಿತ್ತು.

ಒರಾಕಲ್ ಮಾಜಿ ಸಿಇಒ ದಿ.ಹರ್ಡ್‌ ಪತ್ನಿ ಜೊತೆ ಪ್ರೀತಿ ಒಪ್ಪಿದ ಬಿಲ್‌ಗೇಟ್ಸ್‌

ನವದೆಹಲಿ: ವಿಶ್ವದ ಅಗರ್ಭ ಶ್ರೀಮಂತ, ಮೈಕ್ರೋಸಾಫ್ಟ್‌ ಸಹಸಂಸ್ಥಾಪಕ ಬಿಲ್‌ ಗೇಟ್ಸ್‌, ತಮ್ಮ 69ನೇ ವಯಸ್ಸಿನಲ್ಲಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದಾರೆ. ಒರಾಕಲ್ ಮಾಜಿ ಸಿಇಒ ದಿ.ಮಾರ್ಕ್‌ ಹರ್ಡ್ ಪತ್ನಿ ಪೌಲಾ ಹರ್ಡ್‌ ಜೊತೆ ಪ್ರೇಮ ಸಂಬಂಧದಲ್ಲಿರುವುದಾಗಿ ಒಪ್ಪಿಕೊಂಡಿದ್ದಾರೆ. 2021ರಲ್ಲಿ ಪತ್ನಿಯಿಂದ ದೂರವಾದ ಬಳಿಕ ಬಿಲ್‌ಗೇಟ್ಸ್‌ ಪೌಲ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಬ್ಬರೂ ತಮ್ಮ ಪ್ರೀತಿ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಇದೀಗ ಬಿಲ್‌ಗೇಟ್ಸ್‌ ಈ ಬಗ್ಗೆ ಮಾತನಾಡಿದ್ದು, ‘ ಪೌಲಾ ಎಂಬ ಗೆಳತಿ ಸಿಕ್ಕಿದ್ದು ನನ್ನ ಅದೃಷ್ಟ. ಇಬ್ಬರೂ ಒಟ್ಟಿಗೆ ಆನಂದಿಸಿದ್ದೇವೆ. ಒಲಿಂಪಿಕ್ಸ್‌ಗೆ ಹೋಗಿದ್ದೇವೆ. ಇನ್ನು ಅನೇಕ ಕ್ಷಣಗಳನ್ನು ಒಟ್ಟಿಗೆ ಕಳೆದಿದ್ದೇವೆ’ ಎಂದಿದ್ದಾರೆ.

ಮಾಜಿ ಪ್ರಧಾನಿ ಪುತ್ರನಿಗೆ ಬಾಯಿ ಮುಚ್ಕೋ ಎಂದ ಖರ್ಗೆ: ಧನಕರ್‌ ಆಕ್ಷೇಪ

ನವದೆಹಲಿ: ಸೋಮವಾರ ರಾಜ್ಯಸಭೆಯ ಕಲಾಪದ ವೇಳೆ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರನ ಬಗ್ಗೆ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಖರ್ಗೆ ಮಾತನಾಡುವಾಗ ಮಾಜಿ ಪ್ರಧಾನಿ ಚಂದ್ರಶೇಖರ್‌ ಪುತ್ರ ಶೇಖರ್‌ ಮಧ್ಯಪ್ರವೇಶ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಖರ್ಗೆ, ‘ನಾನು ನಿಮ್ಮಪ್ಪನ ಜೊತೆಯಿದ್ದವನು. ನೀನೇನು ಮಾತಾಡುತ್ತಿದ್ದೀಯಾ.. ನಿನ್ನನ್ನು ಎತ್ತಿ ಸುತ್ತಾಡಿಸಿದ್ದೀನಿ. ಬಾಯಿ ಮುಚ್ಚಿ ಕೂತ್ಕೊ’ ಎಂದು ದಬಾಯಿಸಿದ್ದಾರೆ. 

 ಈ ವೇಳೆ ಪೀಠದಲ್ಲಿದ್ದ ಸಭಾಧ್ಯಕ್ಷ ಧನಕರ್‌, ‘ಚಂದ್ರಶೇಖರ್‌ ಜೀ ಈ ದೇಶ ಕಂಡ ಮಹಾನ್ ನಾಯಕರಲ್ಲೊಬ್ಬರು. ಈ ದೇಶದಲ್ಲಿ ಅವರಿಗಿರುವ ಗೌರವ ಎಣಿಕೆಗೆ ಸಿಗದು. ಹೀಗಾಗಿ ಖರ್ಗೆ ತಮ್ಮ ಮಾತನ್ನು ಹಿಂತೆಗೆದುಕೊಳ್ಳುಬೇಕು ಎಂದು ಕೋರಿದರು.