ಕೊನೆಗೂ ಏರಿಂಡಿಯಾ ಎಕ್ಸ್‌ಪ್ರೆಸ್‌ ಬಿಕ್ಕಟ್ಟು ಅಂತ್ಯ

| Published : May 10 2024, 01:35 AM IST / Updated: May 10 2024, 06:59 AM IST

ಸಾರಾಂಶ

ವೇತನ ಸೇರಿದಂತೆ ಇತರೆ ವಿಷಯ ಮುಂದಿಟ್ಟುಕೊಂಡು ಅನಾರೋಗ್ಯದ ನೆಪವೊಡ್ಡಿ ಸಾಮೂಹಿಕ ರಜೆ ಹಾಕಿದ್ದ ಏರಿಂಡಿಯಾ ಏಕ್ಸ್‌ಪ್ರೆಸ್‌ನ 300ಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಅಘೋಷಿತ ಮುಷ್ಕರ ಕೈಬಿಟ್ಟು ಗುರುವಾರ ಕೆಲಸಕ್ಕೆ ಮರಳಿದ್ದಾರೆ.

ನವದೆಹಲಿ: ವೇತನ ಸೇರಿದಂತೆ ಇತರೆ ವಿಷಯ ಮುಂದಿಟ್ಟುಕೊಂಡು ಅನಾರೋಗ್ಯದ ನೆಪವೊಡ್ಡಿ ಸಾಮೂಹಿಕ ರಜೆ ಹಾಕಿದ್ದ ಏರಿಂಡಿಯಾ ಏಕ್ಸ್‌ಪ್ರೆಸ್‌ನ 300ಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಅಘೋಷಿತ ಮುಷ್ಕರ ಕೈಬಿಟ್ಟು ಗುರುವಾರ ಕೆಲಸಕ್ಕೆ ಮರಳಿದ್ದಾರೆ. ಹೀಗಾಗಿ ಕಳೆದ 2 ದಿನಗಳಿಂದ ಬಿಕ್ಕಟ್ಟು ಕೊನೆಗೂ ಸುಖಾಂತ್ಯವಾದಂತೆ ಆಗಿದೆ.

ಸಿಬ್ಬಂದಿಗಳ ಬೇಡಿಕೆ ಕುರಿತು ಪರಿಶೀಲಿಸುವುದಾಗಿ ಏರಿಂಡಿಯಾ ಆಡಳಿತ ಮಂಡಳಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮತ್ತು 30 ಸಿಬ್ಬಂದಿಗಳ ವಜಾ ಆದೇಶ ಹಿಂಪಡೆಯುವ ಭರವಸೆ ನೀಡಿದ ಬೆನ್ನಲ್ಲೇ ಮುಷ್ಕರ ನಿರತ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದ್ದಾರೆ.

ಇದಕ್ಕೂ ಮೊದಲು ಗುರುವಾರ ಬೆಳಗ್ಗೆ 30 ಸಿಬ್ಬಂದಿಗಳನ್ನು ವಜಾ ಮಾಡಲಾಗಿತ್ತು. ಉಳಿದವರಿಗೆ ಕರ್ತವ್ಯಕ್ಕೆ ಮರಳಲು ಸಂಜೆ 4 ಗಂಟೆಯ ಗಡುವು ನೀಡಲಾಗಿತ್ತು. ಅದರ ಬೆನ್ನಲ್ಲೇ ಪ್ರಕರಣ ಸುಖಾಂತ್ಯವಾಗಿದೆ.

ಕಳೆದ 2 ದಿನಗಳಲ್ಲಿ ಏರಿಂಡಿಯಾ ಎಕ್ಸ್‌ಪ್ರೆಸ್‌ನ 160ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾದ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಾವಿರಾರು ಪ್ರಯಾಣಿಕರು ಸಮಸ್ಯೆಗೆ ತುತ್ತಾಗಿದ್ದರು.

ಏರಿಂಡಿಯಾದಲ್ಲಿ ವಿಲೀನ ಬಳಿಕ ತಮಗೆ ವೇತನ ಸೇರಿದಂತೆ ನಾನಾ ವಿಷಯದಲ್ಲಿ ತಾರತಮ್ಯ ಮಾಡಲಾಗಿದೆ ಎಂದು 300ಕ್ಕೂ ಹೆಚ್ಚು ಸಿಬ್ಬಂದಿ ಮಂಗಳವಾರ ರಾತ್ರಿಯಿಂದಲೇ ಸಾಮೂಹಿಕ ರಜೆ ಹಾಕಿ, ಮೊಬೈಲ್‌ ಸ್ವಿಚಾಫ್‌ ಮಾಡಿಕೊಂಡಿದ್ದರು.