ಸಾರಾಂಶ
ಚೆನ್ನೈ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಏರ್ಪಟ್ಟಿದ್ದ ಮೈತ್ರಿಗೆ ಆರಂಭದಲ್ಲೇ ಕಂಟಕ ಎದುರಾಗಿದೆ.
‘ಬಿಜೆಪಿಯೊಂದಿಗಿನ ಮೈತ್ರಿ ಚುನಾವಣೆಯವರೆಗೆ ಇರುತ್ತದೆ. ಆದರೆ ಬಳಿಕ ಮೈತ್ರಿ ಸರ್ಕಾರ ರಚನೆಯಾಗುವುದು ನಮಗೆ ಒಪ್ಪಿಗೆಯಿಲ್ಲ’ ಎಂದು ಅಣ್ಣಾ ಡಿಎಂಕೆಯ ಅಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ. ಇದು ತಮಿಳುನಾಡು ರಾಜಕೀಯದತ್ತ ಕುತೂಹಲದಿಂದ ನೋಡುವಂತೆ ಮಾಡಿದೆ.
ರಾಜ್ಯದಲ್ಲಿ ಇಲ್ಲಿಯವರೆಗೂ ಹಿಡಿತ ಸಾಧಿಸುವಲ್ಲಿ ಸಫಲವಾಗದ ಬಿಜೆಪಿಯೊಂದಿಗೆ ತಮ್ಮ ಪಕ್ಷ ಕೈಜೋಡಿಸಿರುವ ಬಗ್ಗೆ ಕೆಲ ಅಣ್ಣಾ ಡಿಎಂಕೆ ನಾಯಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಅಲ್ಪಸಂಖ್ಯಾತರ ಮತ ಕೈತಪ್ಪುವ ಭೀತಿ ಮತ್ತು 2021ರ ವಿಧಾನಸಭೆ, 2019 ಹಾಗೂ 2024ರ ಲೋಕಸಭೆ ಚುನಾವಣೆಯ ಕಳಪೆ ಫಲಿತಾಂಶ ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಬಿಜೆಪಿ ಹೇಳಿಕೆಗೆ ವ್ಯತಿರಿಕ್ತ:
ಎಡಪ್ಪಾಡಿಯವರ ಈ ಹೇಳಿಕೆಗೆ ಬಿಜೆಪಿ ಕಡೆಯಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಉಭಯ ಪಕ್ಷಗಳ ನಡುವೆ ಮೈತ್ರಿಯಾದಾಗ, ‘ಒಟ್ಟಿಗಿದ್ದಾಗ ಬಲಶಾಲಿಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ, ‘ಎನ್‌ಡಿಎ ಪಕ್ಷಗಳು ಮುಂದಿನ ವರ್ಷದ ಚುನಾವಣೆಯನ್ನು ಒಟ್ಟಿಗೆ ಎದುರಿಸಲಿದ್ದು, ಎಐಎಡಿಎಂಕೆ ಯಾವುದೇ ಷರತ್ತು ವಿಧಿಸಿಲ್ಲ’ ಎಂದಿದ್ದರು.