ಸಾರಾಂಶ
ದೆಹಲಿ ಏರ್ ಇಂಡಿಯಾ ವಿಮಾನ ಪ್ರಯಾಣಿಕರು ತಮ್ಮ ವಿಮಾನವನ್ನು ಅನಿಯಮಿತವಾಗಿ ವಿಳಂಬ ಮಾಡಿದ್ದರಿಂದ ಉಂಟಾದ ಅನಾನುಕೂಲತೆಗಳ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಕಾಯುವ ಸಮಯದಲ್ಲಿ ತಮಗೆ ತಿನ್ನಲು ಮತ್ತು ಕುಡಿಯಲು ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.
ನವದೆಹಲಿ: ಪ್ರತಿಕೂಲ ಹವಾಮಾನ ಮತ್ತು ಮಂದ ಬೆಳಕಿನ ಕಾರಣ ದೆಹಲಿಯಲ್ಲಿ ಭಾನುವಾರ ನೂರಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿದ್ದು, ದೆಹಲಿಯಿಂದ ಮುಂಬೈಗೆ ತೆರಳಬೇಕಿದ್ದ ಏರ್‌ಇಂಡಿಯಾ ವಿಮಾನ ಪ್ರಯಾಣಿಕರನ್ನು ನೀರು, ಆಹಾರವಿಲ್ಲದೆ 17 ಗಂಟೆಗಳ ಕಾಲ ಕಾಯಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ಪ್ರಯಾಣಿಕರಾದ ರಿಫ್ಕಾ ವರ್ಮಾ, ‘ಬೆಳಗ್ಗೆ 9 ಗಂಟೆಗೆ ಹೊರಡಬೇಕಿದ್ದ ವಿಮಾನವನ್ನು ಮಂದ ಬೆಳಕಿನ ಕಾರಣ ನಿಲ್ಲಿಸಿ ನಮ್ಮನ್ನು ಮಧ್ಯಾಹ್ನ 2 ಗಂಟೆಯವರೆಗೆ ವಿಮಾನದಲ್ಲೇ ಕುಳಿತುಕೊಳ್ಳುವಂತೆ ಹೇಳಲಾಯಿತು.
ಈ ವೇಳೆ ನಮಗೆ ಯಾವುದೇ ನೀರು ಮತ್ತು ಆಹಾರದ ಸೌಲಭ್ಯವಿರಲಿಲ್ಲ. ಮಕ್ಕಳು ಬಹಳ ನಿತ್ರಾಣಗೊಂಡಿದ್ದರೆ ಬಿಸಿಲ ಧಗೆಯಿಂದ ದಣಿದಿದ್ದ ನಮಗೆ ತಂಪೆರೆಯಲು ಹವಾನಿಯಂತ್ರಕ ಕೂಡ ಕೆಲಸ ಮಾಡುತ್ತಿರಲಿಲ್ಲ.
2 ಗಂಟೆಗೆ ವಿಮಾನ ಹೊರಡಲು ಅನುಮತಿ ದೊರೆತರೂ ಪೈಲಟ್‌ನನ್ನು ಮತ್ತೊಂದು ವಿಮಾನಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿ ನಮ್ಮನ್ನು ವಿಮಾನದಿಂದ ಇಳಿಸಿ ಲಾಂಜ್‌ನಲ್ಲಿ ಕಾಯುವಂತೆ ಸೂಚಿಸಲಾಯಿತು.
ಸಂಜೆ 5:30ಕ್ಕೆ ಪೈಲಟ್ ಸಿಕ್ಕರೂ ನಾವು ಹತ್ತುವ ವೇಳೆಗೆ ರಾತ್ರಿ 8 ಗಂಟೆಯಾಗಿತ್ತು. ಈ ಹದಿನೇಳು ಗಂಟೆಯಲ್ಲಿ ನಮಗೆ ಕೆಲವು ಚಿಪ್ಸ್ ಪ್ಯಾಕೆಟ್‌ಗಳನ್ನು ಬಿಟ್ಟು ತಿನ್ನಲು ಬೇರೇನೂ ಇರಲಿಲ್ಲ. ಇದಕ್ಕೆ ವಿಮಾನಯಾನ ನಿರ್ವಹಣಾ ಸಿಬ್ಬಂದಿಯ ನಿರ್ಲಕ್ಷ್ಯವೇ ನೇರ ಕಾರಣ’ ಎಂದು ಆರೋಪಿಸಿದ್ದಾರೆ.
ವಿಶಾಖಪಟ್ಟಣದಲ್ಲೂ ಪ್ರಯಾಣಿಕರ ಆಕ್ರೋಶ: ವಿಶಾಖಪಟ್ಟಣ: ವಿಶಾಖಪಟ್ಟಣ ವಿಮಾಣ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಭಾನುವಾರ ಏರ್‌ಇಂಡಿಯಾ ಮತ್ತು ಇಂಡಿಗೋಗೆ ಸೇರಿದ ಆರು ವಿಮಾನಗಳು ದಿಢೀರನೆ ರದ್ದುಗೊಂಡು ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ಪರ್ಯಾಯ ಮಾರ್ಗವಿಲ್ಲದೆ ಪ್ರಯಾಣಿಕರು ವಿಮಾನ ಕಂಪನಿಗಳು ವ್ಯವಸ್ಥೆ ಮಾಡಿದ ವಸತಿಯಲ್ಲೇ ತಂಗಿದ್ದು, ಸೋಮವಾರ ಮುಂಜಾನೆ 8ರ ನಂತರ ಪ್ರಯಾಣ ಮುಂದುವರೆಸಿದರು.