ಸಾರಾಂಶ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ, 6ನೇ ಬಾರಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಶುಭ ಸಮಾಚಾರ ಬಂದಿದೆ. ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಮಂಡಳಿಯು ಪವಾರ್‌ಗೆ ಬೇನಾಮಿ ಆಸ್ತಿ ಕೇಸಲ್ಲಿ ಕ್ಲೀನ್‌ಚಿಟ್ ನೀಡಿದೆ.
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ, 6ನೇ ಬಾರಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಶುಭ ಸಮಾಚಾರ ಬಂದಿದೆ. ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಮಂಡಳಿಯು ಪವಾರ್‌ಗೆ ಬೇನಾಮಿ ಆಸ್ತಿ ಕೇಸಲ್ಲಿ ಕ್ಲೀನ್‌ಚಿಟ್ ನೀಡಿದೆ.
ಇದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು 2021ರಲ್ಲಿ ವಶಪಡಿಸಿಕೊಂಡಿದ್ದ ಅವರ ₹ 1,000 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ತನ್ನ ಹಿಡಿತದಿಂದ ಬಿಡುಗಡೆ ಮಾಡಿದೆ.ಈ ನಡುವೆ ಈ ಬಗ್ಗೆ ಜಾಗರೂಕರಾಗಿ ಪ್ರತಿಕ್ರಿಯಿಸಿದ ಪವಾರ್, ‘ಯಾವಾಗಲೂ ಆರೋಪಗಳನ್ನು ಸರಳವಾಗಿ ಸ್ವೀಕರಿಸುವ ಅಗತ್ಯವಿಲ್ಲ. ಎಲ್ಲರಿಗೂ ಮೇಲ್ಮನವಿ ಸಲ್ಲಿಸುವ ಹಕ್ಕಿದೆ’ ಎಂದು ಮಾರ್ಮಿಕವಾಗಿ ನುಡಿದರು. ಈ ಮೂಲಕ ನ್ಯಾಯಮಂಡಳಿ ತೀರ್ಪನ್ನು ಐಟಿ ಇಲಾಖೆ ಉನ್ನತ ಕೋರ್ಟಲ್ಲಿ ಪ್ರಶ್ನಿಸಬಹುದು ಎಂಬ ಸುಳಿವು ನೀಡಿದರು.
ಏನಿದು ಪ್ರಕರಣ?:ಪವಾರ್ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ 2021ರಲ್ಲಿ ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್, ಗೋವಾದ ರೆಸಾರ್ಟ್ ಸೇರಿದಂತೆ ಹಲವು ಆಸ್ತಿಗಳನ್ನು ಜಪ್ತಿ ಮಾಡಿತ್ತು.
ಆದರೆ ವಿಚಾರಣೆ ವೇಳೆ ಯಾವುದೇ ಆಸ್ತಿಯನ್ನು ಅಜಿತ್ ಪವಾರ್ ಹೆಸರಿನಲ್ಲಿ ನೋಂದಾಯಿಸಿಲ್ಲ ಎಂದು ತಿಳಿದುಬಂತು. ಹೀಗಾಗಿ ಸಾಕ್ಷ್ಯಾಧಾರದ ಕೊರತೆ ಕಾರಣ ನ್ಯಾಯಮಂಡಳಿಯು ಪವಾರ್ ವಿರುದ್ಧದ ಕೇಸನ್ನು ವಜಾ ಮಾಡಿದೆ.