ಸಾರಾಂಶ
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ‘ಶಾಸನಬದ್ಧವಾಗಿ ರಚನೆಯಾಗಿದೆ ಎಂದ ಮಾತ್ರಕ್ಕೆ ಯಾವುದೇ ಶಿಕ್ಷಣ ಸಂಸ್ಥೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಸುಪ್ರಿಂಕೋರ್ಟ್‌ನ ಸಂವಿಧಾನ ಪೀಠ ತೀರ್ಪು ನೀಡಿದೆ.
ನವದೆಹಲಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ‘ಶಾಸನಬದ್ಧವಾಗಿ ರಚನೆಯಾಗಿದೆ ಎಂದ ಮಾತ್ರಕ್ಕೆ ಯಾವುದೇ ಶಿಕ್ಷಣ ಸಂಸ್ಥೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಸುಪ್ರಿಂಕೋರ್ಟ್‌ನ ಸಂವಿಧಾನ ಪೀಠ ತೀರ್ಪು ನೀಡಿದೆ. 4:3ರ ಬಹುಮತದ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಶುಕ್ರವಾರ ಈ ತೀರ್ಪು ನೀಡಿದೆ.
‘ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ವಿವಿಯೇ?’ ಎಂಬ ಅರ್ಜಿಯ ಸಂಬಂಧ ಈ ತೀರ್ಪು ಬಂದಿದೆ. ಆದರೆ, ‘ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ವಿವಿಯೇ?’ ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಇನ್ನೂ ರಚನೆಯಾಗದ ತ್ರಿಸದಸ್ಯ ಪೀಠದ ವಿಚಾರಣೆಗೆ ಸಂವಿಧಾನ ಪೀಠ ವಹಿಸಿದೆ.ಶುಕ್ರವಾರದ ಈ ತೀರ್ಪಿನ ಮೂಲಕ ಸಂವಿಧಾನ ಪೀಠವು 1967ರಲ್ಲಿ ಸುಪ್ರೀಂಕೋರ್ಟ್ ‘1875ರಲ್ಲಿ ಸ್ಥಾಪಿತವಾದ ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ವಿವಿ ಅಲ್ಲ. ಏಕೆಂದರೆ ಅದು ಕಾಯ್ದೆಯ ಮೂಲಕ ರಚನೆಯಾಗಿದೆ’ ಎಂದು ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.
‘ಒಂದು ಶಿಕ್ಷಣ ಸಂಸ್ಥೆಯು ಅಲ್ಪಸಂಖ್ಯಾತ ಹೌದೋ ಅಲ್ಲವೋ ಎಂಬುದನ್ನು ಅದು ಕಾಯ್ದೆಯ ಮೂಲಕ ರಚನೆಯಾಗಿದೆಯೋ ಇಲ್ಲವೋ ಎಂಬ ಅಂಶವು ನಿರ್ಧರಿಸುವುದಿಲ್ಲ. ಬದಲಿಗೆ, ಅದನ್ನು ಸ್ಥಾಪಿಸಿದ ‘ಮೆದುಳು’ ಯಾವುದು ಎಂಬುದನ್ನು ನೋಡಬೇಕು. ಆಗ ಅದು ಅಲ್ಪಸಂಖ್ಯಾತ ಸಮುದಾಯದತ್ತ ಬೊಟ್ಟು ಮಾಡಿದರೆ ಆ ಶಿಕ್ಷಣ ಸಂಸ್ಥೆಯು ಸಂವಿಧಾನದ 30ನೇ ಪರಿಚ್ಛೇದದ ಆಧಾರದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಳಬಹುದು’ ಎಂದು ಸುಪ್ರೀಂಕೋರ್ಟ್ ಹೇಳಿದೆ.ವಿಶೇಷವೆಂದರೆ, ಇದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಕೊನೆಯ ಕಾರ್ಯನಿರ್ವಹಣೆಯ ದಿನ ಹೊರಬಿದ್ದ ತೀರ್ಪಾಗಿದೆ.