ಸಾರಾಂಶ
-ಚುನಾವಣೆಯಲ್ಲಿ ಅಕ್ರಮ ಎಂದು ಆರೋಪಿಸಿದ್ದ ರಾಹುಲ್
-ಔಪಚಾರಿಕ ಪತ್ರಮುಖೇನ ಆರೋಪ ಅಲ್ಲಗಳೆದ ಆಯೋಗನವದೆಹಲಿ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಔಪಚಾರಿಕವಾಗಿ ಪತ್ರ ಬರೆದಿದ್ದು, ಸಂಸತ್ತು ಅಂಗೀಕರಿಸಿದ ಕಾನೂನುಗಳು ಮತ್ತು ನಿಯಮಗಳ ಪ್ರಕಾರ ಎಲ್ಲಾ ಚುನಾವಣೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ.
‘ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಬಿಜೆಪಿ ತಾನು ಸೋಲುವ ಎಲ್ಲ ಕಡೆಗಳಲ್ಲೂ ಈ ರೀತಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತದೆ’ ಎಂದು ಆರೋಪಿಸಿ ವಿವಿಧ ಪತ್ರಿಕೆಗಳಿಗೆ ರಾಹುಲ್ ಗಾಂಧಿ ಲೇಖನ ಬರೆದಿದ್ದರು. ತಮ್ಮ ಲೇಖನಕ್ಕೆ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆಯನ್ನೂ ಬಯಸಿದ್ದರು.ಅವರ ಲೇಖನಕ್ಕೆ ಜೂ.12ರಂದು ಚುನಾವಣಾ ಆಯೋಗ ಈ ಮೇಲ್ ಮೂಲಕ ಉತ್ತರಿಸಿದ್ದು, ‘ಇಡೀ ಚುನಾವಣಾ ಪ್ರಕ್ರಿಯೆಯನ್ನು ವಿಕೇಂದ್ರೀಕೃತ ರೀತಿಯಲ್ಲಿ ನಡೆಸಲಾಗುತ್ತದೆ. ಮಹಾರಾಷ್ಟ್ರದಾದ್ಯಂತ 1,08,026 ಬೂತ್ ಮಟ್ಟದ ಏಜೆಂಟ್‌ಗಳನ್ನು ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ನೇಮಿಸಿವೆ, ಇದರಲ್ಲಿ 28,421 ಕಾಂಗ್ರೆಸ್ ಏಜೆಂಟ್‌ಗಳು ಸೇರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪ್ರಶ್ನಿಸಿದ್ದಾರೆ. ಆದರೂ, ನಿಮಗೆ ಇನ್ಯಾವುದೇ ಸಮಸ್ಯೆಗಳಿದ್ದರೆ, ನೀವು ನಮಗೆ ಪತ್ರ ಬರೆಯಬಹುದು. ಆಯೋಗವು ಪರಸ್ಪರ ಅನುಕೂಲಕರ ದಿನಾಂಕ ಮತ್ತು ಸಮಯದಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ಧವಾಗಿದೆ’ ಎಂದು ತಿಳಿಸಿದೆ.