ಭ್ರಷ್ಟಾಚಾರ ಆರೋಪಿ ನ್ಯಾಯಮೂರ್ತಿ ವರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಆಗ್ರಹ

| N/A | Published : Mar 25 2025, 12:47 AM IST / Updated: Mar 25 2025, 04:24 AM IST

ಸಾರಾಂಶ

ಭ್ರಷ್ಟಾಚಾರ ಆರೋಪಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ದಿಲ್ಲಿ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದನ್ನು ಅಲಹಾಬಾದ್‌ ಬಾರ್‌ ಕೌನ್ಸಿಲ್‌ ಖಂಡಿಸಿದೆ ಹಾಗೂ ಮಂಗಳವಾರದಿಂದ ಅನಿರ್ದಿಷ್ಟ ಮುಷ್ಕರ ಘೋಷಿಸಿದೆ.

ನವದೆಹಲಿ: ಭ್ರಷ್ಟಾಚಾರ ಆರೋಪಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ದಿಲ್ಲಿ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದನ್ನು ಅಲಹಾಬಾದ್‌ ಬಾರ್‌ ಕೌನ್ಸಿಲ್‌ ಖಂಡಿಸಿದೆ ಹಾಗೂ ಮಂಗಳವಾರದಿಂದ ಅನಿರ್ದಿಷ್ಟ ಮುಷ್ಕರ ಘೋಷಿಸಿದೆ.

ಕೂಡಲೇ ವರ್ಮಾ ವಿರುದ್ಧ ಸಿಬಿಐ, ಇ.ಡಿ. ತನಿಖೆ ಆಗಬೇಕು. ಎಫ್‌ಐಆರ್‌ ದಾಖಲಿಸಬೇಕು ಹಾಗೂ ವಾಗ್ದಂಡನೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದೆ.

ಇದೇ ವೇಳೆ, ಅಲಹಾಬಾದ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ನೀಡಿದ ಎಲ್ಲಾ ತೀರ್ಪುಗಳನ್ನು ಪರಿಶೀಲಿಸುವಂತೆ ಕೂಡ ಒತ್ತಾಯಿಸಿದೆ. ನ್ಯಾಯಾಧೀಶರು ಸಂಶಯ ಮೀರಿ ಇರಬೇಕು ಎಂದಿರು ಅದು, ನ್ಯಾಯಾಧೀಶರನ್ನು ರೋಮನ್ ಆಡಳಿತಗಾರ ಜೂಲಿಯಸ್ ಸೀಸರ್ ಅವರ ಪತ್ನಿಗೆ ಹೋಲಿಸಿದೆ.

ನ್ಯಾ। ವರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಲು ಅರ್ಜಿ

ನವದೆಹಲಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ನ್ಯಾಯಾಧೀಶ ಯಶವಂತ್ ವರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಕೆಯಾಗಿದೆ.1991ರಲ್ಲಿ ಕೆ.ವೀರಸ್ವಾಮಿ ಪ್ರಕರಣದಲ್ಲಿ ಸಿಜೆಐ ಪೂರ್ವಾನುಮತಿಯಿಲ್ಲದೆ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಮ್ಯಾಥ್ಯೂಸ್‌ ಜೆ.ನೆದುಂಪುರ ಮತ್ತು ಇತರೆ ಮೂವರು 23ರಂದು ಈ ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶರಿಗೆ ನೀಡಲಾದ ರಕ್ಷಣೆಯು ಕಾನೂನು ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಸಮಾನತೆಯ ತತ್ವವನ್ನು ಉಲ್ಲಂಘಿಸುತ್ತದೆ. ಇದು ನ್ಯಾಯಾಂಗಿಕ ಉತ್ತರದಾಯಿತ್ವ ಮತ್ತು ಕಾನೂನು ನಿಯಮದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗಿದೆ.