ಪುಷ್ಪ-2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ವೇಳೆ ಅಲ್ಲು ನಮ್ಮ ಸಲಹೆ ಪಾಲಿಸಲಿಲ್ಲ: ಪೊಲೀಸ್‌ ಆಕ್ರೋಶ

| Published : Dec 24 2024, 12:46 AM IST / Updated: Dec 24 2024, 03:46 AM IST

allu arjun film pushpa 2 day 15 box office collection
ಪುಷ್ಪ-2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ವೇಳೆ ಅಲ್ಲು ನಮ್ಮ ಸಲಹೆ ಪಾಲಿಸಲಿಲ್ಲ: ಪೊಲೀಸ್‌ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪುಷ್ಪ-2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಬಗ್ಗೆ ನಟ ಅಲ್ಲು ಅರ್ಜುನ್‌ಗೆ ಮಾಹಿತಿ ನೀಡಿದರೂ ಅವರು ಥಿಯೇಟರ್‌ನಿಂದ ಹೊರಡಲಿಲ್ಲ ಎಂದು ಹೈದರಾಬಾದ್‌ ಪೊಲೀಸರು ಆರೋಪಿಸಿದ್ದಾರೆ.

ಹೈದರಾಬಾದ್‌: ಪುಷ್ಪ-2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಬಗ್ಗೆ ನಟ ಅಲ್ಲು ಅರ್ಜುನ್‌ಗೆ ಮಾಹಿತಿ ನೀಡಿದರೂ ಅವರು ಥಿಯೇಟರ್‌ನಿಂದ ಹೊರಡಲಿಲ್ಲ ಎಂದು ಹೈದರಾಬಾದ್‌ ಪೊಲೀಸರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್‌ ಅಧಿಕಾರಿಗಳು, ‘ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾದ ಬಗ್ಗೆ ಅಲ್ಲೂ ಅವರ ವ್ಯವಸ್ಥಾಪಕರಿಗೆ ತಿಳಿಸಿದೆವು. ಇದನ್ನವರು ನಟನಿಗೆ ತಿಳಿಸುವುದಾಗಿ ಹೇಳಿದರೂ ಅಂತೆ ಮಾಡಲಿಲ್ಲ. ಕೊನೆಗೆ ನಾವೇ ಅವರ ಬಳಿ ಹೋಗಿ, ನಿಮ್ಮನ್ನು ನೋಡುವ ಭರದಲ್ಲಿ ಅಭಿಮಾನಿಗಳಿಗೆ ಮತ್ತಷ್ಟು ತೊಂದರೆಯಾಗುವುದನ್ನು ತಡೆಯಲು ಕೂಡಲೇ ಥಿಯೇಟರ್‌ನಿಂದ ಹೊರಡುವಂತೆ ಕೋರಿದೆವು. ಅದಕ್ಕೊಪ್ಪದ ಅಲ್ಲು, ಪೂರ್ತಿ ಸಿನಿಮಾ ನೋಡಿಯೇ ತೆರಳುವುದಾಗಿ ತಿಳಿಸಿದರು. ಕೊನೆಗೆ ಹಿರಿಯ ಅಧಿಕಾರಿಗಳು ಅವರನ್ನು ಹೊರಗೆ ಕರೆತಂದರು’ ಎಂದರು.

ಸಂತ್ರಸ್ತ ಮಹಿಳೆ ಕುಟುಂಬಕ್ಕೆ ‘ಪುಷ್ಪ-2’ ತಂಡದಿಂದ 50 ಲಕ್ಷ ರು.

ಹೈದರಾಬಾದ್‌: ಪುಷ್ಪ-2 ಚಿತ್ರಪ್ರದರ್ಶನದ ವೇಳೆ ಥಿಯೇಟರ್‌ಗೆ ಆಗಮಿಸಿದ ನಟ ಅಲ್ಲು ಅರ್ಜುನ್‌ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಾಗ ಉಂಟಾದ ನೂಕುನುಗ್ಗಲಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದ ಮಹಿಳೆಯ ಕುಟುಂಬಕ್ಕೆ ಚಿತ್ರತಂಡ ಸೋಮವಾರ 50 ಲಕ್ಷ ರು. ಪರಿಹಾರ ನೀಡಿತು.ನಿರ್ಮಾಪಕ ನವೀನ್‌ ಯೆರ್ನೇನಿ ಅವರು, ಕಾಲ್ತುಳಿತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ಮಹಿಳೆಯ ಪುತ್ರನನ್ನು ಭೇಟಿ ಮಾಡಿ ಪರಿಹಾರ ವಿತರಿಸಿದರು.

ಈ ನಡುವೆ, ಮಹಿಳೆ ಪತಿ ಭಾಸ್ಕರ್‌ ಮಾಧ್ಯಮಗಳ ಜತೆ ಮಾತನಾಡಿ , ‘ಘಟನೆಗಾಗಿ ಅಲ್ಲು ಅರ್ಜುನ್‌ರನ್ನು ದೂಷಿಸಬೇಡಿ. ಅವರ ವಿರುದ್ಧ ದಾಖಲಾಗಿರುವ ದೂರನ್ನು ಹಿಂಪಡೆಯಲು ಸಿದ್ಧನಿದ್ದೇನೆ’ ಎಂದು ಮತ್ತೊಮ್ಮೆ ಹೇಳಿದರು.‘ಘಟನೆ ನಡೆದ ಬಳಿಕದಿಂದ ಅಲ್ಲು ನಮಗೆ ಬೆಂಬಲವಾಗಿ ನಿಂತಿದ್ದಾರೆ.

 ಆ ದುರ್ಘಟನೆಗಾಗಿ ನಾವು ಯಾರನ್ನೂ ದೂಷಿಸದೆ, ನಮ್ಮ ದುರಾದೃಷ್ಟ ಎಂದುಕೊಳ್ಳುತ್ತೇವೆ. ಅಲ್ಲು ಬಂಧನಕ್ಕೆ ನಮ್ಮನ್ನು ಕಾರಣೀಕರ್ತರನ್ನಾಗಿಸಲಾಗುತ್ತಿದೆ. ಆದರೆ ನಮಗೆ ಕಾನೂನು ಹೋರಾಟ ನಡೆಸುವ ಶಕ್ತಿಯಿಲ್ಲ’ ಎಂದರು.ಕಾಲ್ತುಳಿತದ ಘಟನೆಯಲ್ಲಿ ಭಾಸ್ಕರ್‌ರ ಪುತ್ರ ಶ್ರೀ ತೇಜ್‌ (8) ಕೂಡ ಕೋಮಾದಲ್ಲಿದ್ದಾರೆ.

ಅಲ್ಲು ಮನೆ ಮೇಲೆ ದಾಳಿ ಪ್ರಕರಣ: 6 ಬಂಧಿತರಿಗೆ ಬೇಲ್‌

ಹೈದರಾಬಾದ್‌: ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ನಟ ಅಲ್ಲು ಅರ್ಜುನ್‌ ಮನೆ ಮೇಲೆ ದಾಳಿ ಮಾಡಿ ದಾಂಧಲೆ ಎಬ್ಬಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ 6 ಜನರಿಗೆ ಸೋಮವಾರ ಜಾಮೀನು ನೀಡಲಾಗಿದೆ.

ಇತ್ತ ಈ ಪ್ರಕರಣಕ್ಕೆ ರಾಜಕೀಯ ಬಣ್ಣವನ್ನೂ ಬಳಿಯಲಾಗುತ್ತಿದ್ದು, ‘ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡಲು ಒಪ್ಪದ ಕಾರಣ ಅಲ್ಲು ಅರ್ಜುನ್‌ರನ್ನು ಗುರಿಯಾಗಿಸಲಾಗಿದೆ. ಇದು ರಾಜ್ಯ ಸರ್ಕಾರ ಪ್ರಾಯೋಜಿತ ಉಗ್ರವಾದ’ ಎಂದು ಬಿಜೆಪಿ, ಸಿಎಂ ರೇವಂತ್‌ ರೆಡ್ಡಿ ವಿರುದ್ಧ ಕಿಡಿ ಕಾರಿದೆ.ಅಲ್ಲು ನಿವಾಸದ ಭದ್ರತೆ ಇನ್ನಷ್ಟು ಬಿಗಿ:

ಒಸ್ಮಾನಿಯಾ ವಿವಿ ಸಮಿತಿಯ ಕೆಲ ಸದಸ್ಯರು ಅಲ್ಲು ಅರ್ಜುನ್‌ ಅವರ ನಿವಾಸದತ್ತ ಕಲ್ಲೆಸೆದು ದಾಂಧಲೆ ಸೃಷ್ಟಿಸಿದ ಘಟನೆ ಬಳಿಕ ಅವರ ನಿವಾಸಕ್ಕೆ ಒದಗಿಸಲಾಗಿದ್ದ ಭದ್ರತೆಯನ್ನು ಪೊಲೀಸರು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಜತೆಗೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಸಿಎಂ ರೇವಂತ್‌ ರೆಡ್ಡಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸಿದ್ದಾರೆ.