ಮಹಿಳೆ ಸಾವು ಪ್ರಕರಣ: 3 ತಾಸು ಅಲ್ಲು ವಿಚಾರಣೆ

| Published : Dec 25 2024, 12:45 AM IST

ಸಾರಾಂಶ

ಪುಷ್ಪ-2 ಚಿತ್ರ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ಮಂಗಳವಾರ ಸತತ 3 ತಾಸು ನಟ ಅಲ್ಲು ಅರ್ಜುನ್‌ರ ವಿಚಾರಣೆ ನಡೆಸಿದ್ದಾರೆ.

ಹೈದರಾಬಾದ್‌: ಪುಷ್ಪ-2 ಚಿತ್ರ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ಮಂಗಳವಾರ ಸತತ 3 ತಾಸು ನಟ ಅಲ್ಲು ಅರ್ಜುನ್‌ರ ವಿಚಾರಣೆ ನಡೆಸಿದ್ದಾರೆ.

ತಮ್ಮ ತಂದೆ ಅಲ್ಲು ಅರವಿಂದ್‌ ಜತೆ ಚಿಕ್ಕಡ್ಪಲ್ಲಿ ಪೊಲೀಸ್‌ ಠಾಣೆಗೆ ಆಗಮಿಸಿದ ಅರ್ಜುನ್‌ರನ್ನು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:45ರ ವರೆಗೆ ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ, ಅಲ್ಲು ಅವರ ಥಿಯೇಟರ್‌ ಪ್ರವೇಶ, ಅದಕ್ಕೆ ಅನುಮತಿ ನಿರಾಕರಣೆ ಬಗ್ಗೆ ಅವರಿಗಿದ್ದ ಮಾಹಿತಿ, ನಿರ್ಗಮನ, ವೈಯಕ್ತಿಕ ಭದ್ರತೆ, ಅಭಿಮಾನಿಗಳೊಂದಿಗೆ ಬೌನ್ಸರ್‌ಗಳ ವರ್ತನೆ, ಕಾಲ್ತುಳಿತದ ಬಗ್ಗೆ ಅವರಿಗಿದ್ದ ಮಾಹಿತಿ ಇತ್ಯಾದಿಗಳ ಕುರಿತು ಪ್ರಶ್ನಿಸಲಾಯಿತು.

‘ವಿಚಾರಣೆಯುದ್ದಕ್ಕೂ ನಟ ಪೊಲಿಸರೊಂದಿಗೆ ಸಹಕರಿಸಿದ್ದು, ಅಗತ್ಯವಿದ್ದರೆ ಅವರನ್ನು ಇನ್ನೊಮ್ಮೆ ಕರೆಸಿಕೊಳ್ಳಲಾಗುವುದು’ ಎಂದು ಅಲ್ಲು ಪರ ವಕೀಲ ಅಶೋಕ್‌ ರೆಡ್ಡಿ ತಿಳಿಸಿದರು.ಇದೇ ವೇಳೆ ಅಲ್ಲು ಅರ್ಜುನ್‌ ಅವರನ್ನು ಘಟನೆ ನಡೆದ ಥಿಯೇಟರ್‌ಗೆ ಕರೆದೊಯ್ದು, ಘಟನೆಯನ್ನು ಮರುಸೃಷ್ಟಿಸಲೂ ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

==

ಅಲ್ಲು ಅರ್ಜುನ್‌ರ

ಬೌನ್ಸರ್‌ ಅರೆಸ್ಟ್‌

ಹೈದರಾಬಾದ್‌: ಇಲ್ಲಿನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾದ ವೇಳೆ ಅಭಿಮಾನಿಗಳೊಂದಿಗೆ ಒರಟಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ರ ಬೌನ್ಸರ್‌ ಆದ ಆ್ಯಂಟನಿಯನ್ನು ಬಂಧಿಸಲಾಗಿದೆ.

ಪುಷ್ಪ-2 ಪ್ರೀಮಿಯರ್‌ ಪ್ರದರ್ಶನಕ್ಕಾಗಿ ಆಂಟನಿ ಬೌನ್ಸರ್‌ಗಳ ಗುಂಪನ್ನು ಸಂಘಟಿಸಿದ್ದು, ಥೀಯೇಟರ್‌ನ ಹೊರಗೆ ಅಭಿಮಾನಿಗಳನ್ನು ತಳ್ಳುತ್ತಿರುವುದು ಸಿಸಿಟೀವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.