ಸಾರಾಂಶ
ಸೌತ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,800 ಕೋಟಿ ರು. ಗಳಿಸಿದೆ, ಇದು ಅತ್ಯಂತ ದೊಡ್ಡ ಗಳಿಕೆಯಾಗಿದೆ ಎಂದು ತಯಾರಕರು ಸೋಮವಾರ ಘೋಷಿಸಿದ್ದಾರೆ.
ಮುಂಬೈ: ಸೌತ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,800 ಕೋಟಿ ರು. ಗಳಿಸಿದೆ, ಇದು ಅತ್ಯಂತ ದೊಡ್ಡ ಗಳಿಕೆಯಾಗಿದೆ ಎಂದು ತಯಾರಕರು ಸೋಮವಾರ ಘೋಷಿಸಿದ್ದಾರೆ.
ಸುಕುಮಾರ್ ನಿರ್ದೇಶನದ ತೆಲುಗು ಚಲನಚಿತ್ರವು ಡಿಸೆಂಬರ್ 5 ರಂದು ವಿಶ್ವಾದ್ಯಂತ ಹಿಂದಿ, ತಮಿಳು, ಕನ್ನಡ, ಬಂಗಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಬಿಡುಗಡೆಯಾಗಿತ್ತು. ಪುಷ್ಪ 2 ವಿಶ್ವಾದ್ಯಂತ 32 ದಿನಗಳಲ್ಲಿ 1,831 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಮತ್ತು ಬಾಹುಬಲಿ 2 ರ ಜೀವಮಾನದ ಗಳಿಕೆಯ ದಾಖಲೆ ಮುರಿದಿದೆ.
ಮತದಾರರೇನೂ ನನ್ನ ಬಾಸ್ ಅಲ್ಲ: ಅಜಿತ್ ಪವಾರ್ ವಿವಾದ
ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ತಮ್ಮ ಮತದಾರರಿಗೆ ‘ನೀವು ನನಗೆ ಮತ ಹಾಕಿರಬಹುದು. ಹಾಗೆಂದ ಮಾತ್ರಕ್ಕೆ ನೀವು ನನ್ನನ್ನು ಖರೀದಿಸಿಲ್ಲ’ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ.ಬಾರಾಮತಿಯಲ್ಲಿ ಅಹವಾಲು ಸ್ವೀಕರಿಸುವ ವೇಳೆ ಜನರು ಮುಗಿಬಿದ್ದು ಅರ್ಜಿಗಳನ್ನು ಕೊಡಲು ಮುಂದಾಗಿದಾಗ ಕ್ರೋಧಗೊಂಡ ಪವಾರ್ ‘ನನಗೆ ನೀನು ಮತ ಹಾಕಿರಬಹುದು. ಹಾಗೆಂದ ಮಾತ್ರಕ್ಕೆ ನೀನು ನನ್ನ ಬಾಸ್ ಅಲ್ಲ. ನನ್ನನ್ನೇನು ನಿನ್ನ ಭೂಮಿಯ ಕೂಲಿ ಎಂದು ಭಾವಿಸಿದ್ದೀಯಾ?’ ಎಂದು ಕೆಂಡಾಮಂಡಲರಾದರು. ಪವಾರ್ ಅವರ ಹೇಳಿಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ವಿಪಕ್ಷ ಒಕ್ಕೂಟ ಮಹಾ ವಿಕಾಸ್ ಆಘಾಡಿ, ಪವಾರ್ ಅರವನ್ನು ತರಾಟೆಗೆ ತೆಗೆದುಕೊಂಡಿದೆ.
ಇಂಡಿಯಾ ಗೇಟ್ ಹೆಸರು ಭಾರತ ಮಾತಾ ದ್ವಾರ ಎಂದು ಬದಲಿಸಿ: ಬಿಜೆಪಿ
ನವದೆಹಲಿ: ದೆಹಲಿಯ ಖ್ಯಾತ ಪ್ರವಾಸಿ ಕೇಂದ್ರ ಇಂಡಿಯಾ ಗೇಟ್ ಹೆಸರನ್ನು ‘ಭಾರತ ಮಾತಾ ದ್ವಾರ’ವನ್ನಾಗಿ ಬದಲಾಯಿಸಬೇಕು ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಇಂಡಿಯಾ ಗೇಟ್ ಹೆಸರನ್ನು ಭಾರತ ಮಾತಾ ದ್ವಾರವನ್ನಾಗಿ ಬದಲಾಯಿಸುವುದು ಗೋಡೆಯಲ್ಲಿ ಕೆತ್ತಲ್ಪಟ್ಟಿರುವ ಸಾವಿರಾರು ದೇಶಭಕ್ತರಿಗೆ ನೀಡುವ ನಿಜವಾದ ಗೌರವವಾಗಲಿದೆ. ಮೋದಿ ಸರ್ಕಾರವು ಬ್ರಿಟಿಷ್ ಮತ್ತು ಮೊಘಲರ ಕಾಲದ ನೋವುಗಳನ್ನು ಗುಣಪಡಿಸಿದೆ. ಇದರಿಂದಾಗಿ ದೇಶದಲ್ಲಿ ಗುಲಾಮಗಿರಿಯ ಕಳಂಕ ಅಳಿಸಿಹೋಗಿದೆ ಎಂದಿದ್ದಾರೆ. ಜೊತೆಗೆ ಔರಂಗಜೇಬ್ ರಸ್ತೆಯನ್ನು ಅಬ್ದುಲ್ ಕಲಾಂ ರಸ್ತೆಯನ್ನಾಗಿ ಮರುನಾಮಕರಣ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಲ್ಲೇವಾಲ್ ಜತೆ ಸುಪ್ರೀಂ ನಿಯೋಗ ಭೇಟಿ: ಮನವೊಲಿಕೆ ಯತ್ನ
ನವದೆಹಲಿ: ಕೃಷಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ 1 ತಿಂಗಳಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರನ್ನು ಸೋಮವಾರ ಸುಪ್ರೀಂ ಕೋರ್ಟ್ ನಿಯೋಗವು ಭೇಟಿ ಮಾಡಿದೆ. ಈ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಚಿಕಿತ್ಸೆ ಪಡೆಯುವಂತೆ ಮನವೊಲಿಕೆ ಯತ್ನಿಸಿದೆ.ದಲ್ಲೇವಾಲ್ ಅವರನ್ನು ಭೇಟಿಯಾಗಿ ಮಾತನಾಡಿದ ನಿಯೋಗದ ಅಧ್ಯಕ್ಷ ನಿವೃತ್ತ ನ್ಯಾ। ನವಾಬ್ ಸಿಂಗ್, ನಮ್ಮ ಭೇಟಿಯು ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಮನವಿ ಮಾಡುವುದಕ್ಕಲ್ಲ. ನಾವು ದಲ್ಲೇವಾಲ್ ಅವರ ಆರೋಗ್ಯದ ವಿಚಾರವಾಗಿ ಕಾಳಜಿ ವಹಿಸಿದ್ದೇವೆ. ಹೀಗಾಗಿ ಚಿಕಿತ್ಸೆ ಪಡೆಯುವಂತೆ ಅವರನ್ನು ಆಗ್ರಹಿಸಿದ್ದೇವೆ. 2-3 ದಿನದಲ್ಲಿ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದರು.