ಅದಾನಿ ಹಿಂದಿಕ್ಕಿದ ಮುಕೇಶ್‌ ಅಂಬಾನಿ ದೇಶದ ನಂ.1 ಶ್ರೀಮಂತ

| Published : Oct 11 2023, 12:45 AM IST

ಸಾರಾಂಶ

‘ಹುರೂನ್‌ ಇಂಡಿಯಾ’ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರನ್ನು ಹಿಂದಿಕ್ಕಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮರಳಿ ದೇಶದ ನಂ.1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.
ಮುಂಬೈ: ‘ಹುರೂನ್‌ ಇಂಡಿಯಾ’ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರನ್ನು ಹಿಂದಿಕ್ಕಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮರಳಿ ದೇಶದ ನಂ.1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ಇನ್ನು ಸ್ವಯಂ ಶ್ರೀಮಂತರಾದ ಮಹಿಳೆಯರ ಪಟ್ಟಿಯಲ್ಲಿ ನಾಯಿಕಾ ಸಂಸ್ಥೆಯ ಪಲ್ಗುಣಿ ಪಾಠಕ್‌ ಹಿಂದಿಕ್ಕಿರುವ ಜೋಹೋದ ರಾಧಾ ವೆಂಬು ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಟಾಪ್‌ 10 ಶ್ರೀಮಂತರು: ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ 8.08 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಕೇಶ್‌ ಆಸ್ತಿಯಲ್ಲಿ ಶೇ.2.2ರಷ್ಟು ಮಾತ್ರವೇ ಏರಿಕೆಯಾಗಿದೆ. ಆದರೆ ಕಳೆದ ವರ್ಷದ ಮೊದಲ ಸ್ಥಾನದಲ್ಲಿದ್ದ ಗೌತಮ್‌ ಅದಾನಿ ಆಸ್ತಿ, ಹಿಂಡನ್‌ಬರ್ಗ್‌ ವರದಿ ಪ್ರಕಟ ಬಳಿಕ ಶೇ.57ರಷ್ಟು ಕುಸಿತ ಕಂಡು 4.74 ಲಕ್ಷ ಕೋಟಿಗೆ ಇಳಿದ ಪರಿಣಾಮ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಪುಣೆ ಸೀರಂ ಇನ್‌ಸ್ಟಿಟ್ಯೂಟ್‌ ಮಾಲೀಕ ಸೈರಸ್‌ ಪೂನಾವಾಲಾ (2.78 ಲಕ್ಷ ಕೋಟಿ ರು.), ಎಚ್‌ಸಿಎಲ್‌ನ ಶಿವ ನಾಡಾರ್‌ (2.28 ಲಕ್ಷ ಕೋಟಿ ರು.), ಗೋಪಿಚಂದ್‌ ಹಿಂದೂಜಾ , ದಿಲೀಪ್‌ ಸಿಂಘ್ವಿ , ಲಕ್ಷ್ಮೀ ನಿವಾಸ್‌ ಮಿತ್ತಲ್‌ , ರಾಧಾಕೃಷ್ಣನ್‌ ದಮಾನಿ , ಕುಮಾರ ಮಂಗಳಂ ಬಿರ್ಲಾ , ನೀರಜ್‌ ಬಜಾಜ್‌ ಕ್ರಮವಾಗಿ 3ರಿಂದ 10 ಸ್ಥಾನ ಪಡೆದಿದ್ದಾರೆ. 138 ನಗರಗಳ 1319 ಶ್ರೀಮಂತರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಸಿಷನ್‌ ವೈರ್ಸ್‌ನ ಮುಖ್ಯಸ್ಥ ಮಹೇಂದ್ರ ರತಿಲಾಲ್‌ ತಮ್ಮ 94ನೇ ವಯಸ್ಸಿನಲ್ಲಿ ಸಿರಿವಂತರ ಪಟ್ಟಿ ಸೇರಿದ್ದರೆ, ಜೆಪ್ಟೋ ಸ್ಟಾರ್ಟಪ್‌ನ ಕೈವಲ್ಯ ವೋಹ್ರಾ (20 ವರ್ಷ) ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಕಿರಿಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸಂಸ್ಥೆಯ ವರದಿ ಅನ್ವಯ, ಸದ್ಯ ಭಾರತದಲ್ಲಿ 259 ಶತಕೋಟ್ಯಧೀಶರಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತಿ ಮೂರು ವಾರಕ್ಕೆ ಇಬ್ಬರಂತೆ ಹೊಸಬರು ಶತಕೋಟ್ಯಧೀಶರಾಗಿದ್ದಾರೆ. == ಶ್ರೀಮಂತರಲ್ಲಿ ಬೆಂಗಳೂರು ನಂ.3 ಅತ್ಯಂತ ಹೆಚ್ಚು ಶತಕೋಟ್ಯಧೀಶರು ಇರುವ ನಗರಗಳ ಪೈಕಿ ಮುಂಬೈ (328), ದೆಹಲಿ (199) ಮತ್ತು ಬೆಂಗಳೂರು (100) ಮೊದಲ ಮೂರು ಸ್ಥಾನ ಪಡೆದಿವೆ.