ಸಾರಾಂಶ
ಕಬ್ಬಿಣದ ಪಂಜರಕ್ಕೆ ಸಿಕ್ಕಿಸಿದ್ದ ವೈರ್ ಕಿತ್ತ ಪರಿಣಾಮ ಇಬ್ಬರು ಕೆಳಗೆ ಬಿದ್ದಿದ್ದಾರೆ. ಕಂಪನಿ ಬೆಳ್ಳಿಹಬ್ಬ ಸಮಾರಂಭದಲ್ಲಿ ಭೀಕರ ಘಟನೆ ನಡೆದಿದೆ. ಪಂಜರದಲ್ಲಿ ಕುಳಿತು ವೇದಿಕೆಗೆ ಬರಲು ಸಜ್ಜಾಗಿದ್ದ ಸಿಇಒ, ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹೈದರಾಬಾದ್: ಇಲ್ಲಿನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದಿದ್ದ ಕಂಪನಿಯೊಂದರ ಬೆಳ್ಳಿಹಬ್ಬ ಸಮಾರಂಭ ವೇಳೆ, ಕಬ್ಬಿಣದ ಪಂಜರದಲ್ಲಿ ಕುಳಿತು ವೇದಿಕೆಗೆ ಬರಲು ಸಜ್ಜಾಗಿದ್ದ ಅಮೆರಿಕ ಮೂಲದ ಕಂಪನಿ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಶಾ (51), ಪಂಜರ ನೆಲಕ್ಕಪ್ಪಳಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿಇಒ ಕುಳಿತಿದ್ದ ಕಬ್ಬಿಣದ ಪಂಜರವನ್ನು ಕೇಬಲ್ ವೈರ್ ಬಳಸಿ ಕ್ರೇನ್‌ಗೆ ಕಟ್ಟಲಾಗಿತ್ತು. ಆಗ ಕೇಬಲ್ ವೈರ್ ತುಂಡಾದ ಪರಿಣಾಮ ಪಂಜರ, ಕಾಂಕ್ರೀಟ್ ನೆಲಕ್ಕೆ ಅಪ್ಪಳಸಿದೆ. ಆಗ ಪಂಜರದಲ್ಲಿದ್ದ ಸಂಜಯ್ ಶಾ ಸಾವನ್ನಪ್ಪಿದ್ದಾರೆ.
ಕಂಪನಿಯ ಅಧ್ಯಕ್ಷರಾದ ರಾಜು ದತ್ಲಾ (52) ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಕಂಪನಿಯ 25ನೇ ವರ್ಷದ ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ಸಿಇಒ ಹಾಗೂ ಅಧ್ಯಕ್ಷರ ಅದ್ಧೂರಿ ಸ್ವಾಗತಕ್ಕೆ, ಅವರು ಕಬ್ಬಿಣದ ಪಂಜರದಲ್ಲಿ ಕೆಳಬರುವಂತೆ ವ್ಯವಸ್ಥೆ ರೂಪಿಸಲಾಗಿತ್ತು.
ಆದರೆ ಕೇಬಲ್ ವೈರ್ ತುಂಡಾದ ಪರಿಣಾಮ ಇಬ್ಬರೂ ಕಾಂಕ್ರೀಟ್ ನೆಲದ ಮೇಲೆ ಬಿದ್ದರು. ಆಗ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸಂಜಯ್ ಶಾ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರದ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.