ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ಕಾನ್ಸುಲೇಟ್‌ ಶುರು - ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್‌ನಲ್ಲಿ ಕಚೇರಿ

| Published : Jan 14 2025, 06:39 AM IST

US Flag

ಸಾರಾಂಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಚೇರಿ ಸ್ಥಾಪಿಸಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಜ.17ರಂದು ಈಡೇರುತ್ತಿದೆ.

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಚೇರಿ ಸ್ಥಾಪಿಸಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಜ.17ರಂದು ಈಡೇರುತ್ತಿದೆ. ನಗರದ ಕೇಂದ್ರ ಭಾಗದಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ಕಚೇರಿ ಕಾರ್ಯಾರಂಭ ಮಾಡಲಿದ್ದು, ಇದರಿಂದ ಕನ್ನಡಿಗರು ಇನ್ನು ಮುಂದೆ ಚೆನ್ನೈ ಸೇರಿ ನೆರೆಯ ರಾಜ್ಯಗಳಿಗೆ ಹೋಗುವ ಬದಲು ಬೆಂಗಳೂರಿನಲ್ಲೇ ಅಮೆರಿಕದ ವೀಸಾ ಮತ್ತು ಅದಕ್ಕೆ ಸಂಬಂಧಿಸಿದ ಸೇವೆ ಪಡೆಯಬಹುದಾಗಿದೆ.

ಈ ಹೋಟೆಲ್‌ನಲ್ಲಿ ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಕಮರ್ಷಿಯಲ್ ಸರ್ವೀಸ್ (ಯುಎಸ್‌ಸಿಎಸ್) ಕಚೇರಿ ಇದ್ದು, ಅದೇ ಸ್ಥಳದಲ್ಲೇ ಕಾನ್ಸುಲೇಟ್‌ (ಧೂತವಾಸ) ಕಚೇರಿ ಕಾರ್ಯಾರಂಭ ಮಾಡಲಿದೆ.

ಕಾನ್ಸುಲೇಟ್‌ ಕಚೇರಿ ಸ್ಥಾಪಿಸಲು ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ವೈಟ್‌ಫೀಲ್ಡ್ ಸೇರಿ 2-3 ಸ್ಥಳಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ಅದರಲ್ಲಿ ಒಂದು ಸ್ಥಳವನ್ನು ಅಮೆರಿಕದ ಅಧಿಕಾರಿಗಳು ಆಯ್ಕೆ ಮಾಡುವವರೆಗೆ ಜೆಡಬ್ಲ್ಯು ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಲಾಭ ಏನು?:

ಸದ್ಯ ಬೆಂಗಳೂರಿನ ಸಾವಿರಾರು ಜನ ಅಮೆರಿಕ ವೀಸಾ ಕೆಲಸಗಳಿಗಾಗಿ ನೆರೆಯ ಚೆನ್ನೈ, ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿರುವ ಕಾನ್ಸುಲೇಟ್‌ ಕಚೇರಿಗಳಿಗೆ ಹೋಗಬೇಕಾಗಿದೆ. ಇದರಿಂದ ಅನಗತ್ಯವಾಗಿ ಜನರ ಹಣ ಮತ್ತು ಸಮಯ ಪೋಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೇ ಕಾನ್ಸುಲೇಟ್‌ ಕಚೇರಿ ಆರಂಭಿಸಬೇಕು ಎಂಬ ಬೇಡಿಕೆ ಹತ್ತಾರು ವರ್ಷಗಳಿಂದ ಇತ್ತು. ಈ ಬೇಡಿಕೆ ಕೊನೆಗೂ ಈಡೇರುತ್ತಿದೆ.