ತಿಂಗಳಲ್ಲಿ 2ನೇ ಎಫ್‌ 35 ಪತನ । ಶತ್ರು ಕಣ್ತಪ್ಪಿಸಬಲ್ಲ ಖ್ಯಾತಿಗೆ ದೊಡ್ಡ ಪೆಟ್ಟು

ಪೈಲಟ್‌ ಸಿಕ್ಕರೆ ಹಸ್ತಾಂತರಿಸಿ, ಬಹುಮಾನ ಪಡೆಯಿರಿ: ಇರಾನ್‌ ಘೋಷಣೆಟೆಹ್ರಾನ್‌: ಶತ್ರು ದೇಶಗಳ ರಾಡಾರ್‌ ಕಣ್ಣಿಗೆ ಕಾಣಲ್ಲ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಅತ್ಯಾಧುನಿಕ ಎಫ್‌-35 ಯುದ್ಧ ವಿಮಾನವೊಂದನ್ನು ತಾನು ಹೊಡೆದುರುಳಿಸಿದ್ದಾಗಿ ಇರಾನ್‌ ಘೋಷಿಸಿದೆ. ವಿಮಾನ ಪತನಗೊಂಡಿದ್ದನ್ನು ಅಮೆರಿಕ ಸೇನೆ ಕೂಡಾ ಖಚಿತಪಡಿಸಿದ್ದು, ನಾಪತ್ತೆಯಾಗಿರುವ ಇಬ್ಬರು ಪೈಲಟ್‌ಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿರುವುದಾಗಿ ಹೇಳಿದೆ.

ಇದರೊಂದಿಗೆ ಕಳೆದ 1 ತಿಂಗಳ ಅವಧಿಯಲ್ಲಿ ಅಮೆರಿಕದ 2ನೇ ಎಫ್‌-35 ವಿಮಾನವನ್ನು ಇರಾನ್‌ ಹೊಡೆದುರುಳಿಸಿದಂತೆ ಆಗಿದೆ. ತಲಾ 950 ಕೋಟಿ ರು. ವೆಚ್ಚದ ಈ ವಿಮಾನಗಳ ಪತನ, ಅಮೆರಿಕ ಸ್ಟೆಲ್ತ್‌ ತಂತ್ರಜ್ಞಾನದ ಪಾರಮ್ಯಕ್ಕೆ ಬಿದ್ದ ದೊಡ್ಡ ಪೆಟ್ಟು ಎನ್ನಲಾಗಿದೆ.

ದಕ್ಷಿಣ ಇರಾನ್‌ನ ಕೋಹ್ಕಿಲ್‌ಯೇಹ್‌ ಮತ್ತು ಬೋಯೆರ್‌- ಅಹಮದ್‌ ಪ್ರಾಂತ್ಯದಲ್ಲಿ ಎಫ್‌- 35 ಯುದ್ಧ ವಿಮಾನವನ್ನೇ ಇರಾನ್‌ ಸೇನೆ ಶುಕ್ರವಾರ ಹೊಡೆದುರುಳಿಸಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಕೂಡಾ ಇನ್ನೊಂದು ಎಫ್‌ 35 ವಿಮಾನವನ್ನು ಇರಾನ್‌ ಹೊಡೆದುರುಳಿಸಿತ್ತು. ಆಗ ಪೈಲಟ್‌ ಬಚಾವ್‌ ಆಗಿದ್ದರು. ಆದರೆ ಇದೀಗ ಪೈಲಟ್‌, ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಇರಾನ್‌ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ಈ ನಡುವೆ ಇರಾನ್‌ನ ಮತ್ತೊಂದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ, ‘ನೀವು ಶತ್ರು ದೇಶದ ಪೈಲಟ್‌ ಸೆರೆಹಿಡಿದಿದ್ದರೆ ಅಥವಾ ಜೀವಂತವಾಗಿ ಸಿಕ್ಕಿದ್ದರೆ ನಮಗೆ ಹಸ್ತಾಂತರಿಸಿ. ಭಾರೀ ಬಹುಮಾನ ಪಡೆದುಕೊಳ್ಳಿ ಎಂದು ಆಫರ್‌ ನೀಡಿದೆ.

==


ಅಭಿನಂದನ್‌ ನೆನಪಿಸಿದ ಘಟನೆ

2019ರಲ್ಲಿ ಬಾಲಾಕೋಟ್‌ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಪಾಕ್‌ನೊಳಗೆ ನುಗ್ಗಿ ದಾಳಿ ನಡೆಸಿದ ವೇಳೆ ಭಾರತೀಯ ಸೇನೆಯ ಮಿಗ್‌ ವಿಮಾನ ಪತನಗೊಂಡಿತ್ತು. ಈ ವೇಳೆ ಅದರಲ್ಲಿದ್ದ ಪೈಲಟ್‌ ಅಭಿನಂದನ್‌ ವರ್ತಮಾನ್‌ ವಿಮಾನದಿಂದ ಹೊರಜಿಗಿದಿದ್ದರು. ಆದರೆ ಆ ಪ್ರದೇಶ ಪಾಕ್‌ಗೆ ಸೇರಿದ್ದ ಕಾರಣ ಅವರನ್ನು ಬಂಧಿಸಲಾಗಿತ್ತು. ಆದರೆ ಬಳಿಕ ರಾಜತಾಂತ್ರಿಕ ಒತ್ತಡ ಹೇರಿ ಅವರನ್ನು ಸುರಕ್ಷಿತ ಮತ್ತು ಗೌರವಯುತವಾಗಿ ಬಿಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು.