4 ದಿನದಲ್ಲಿ 14 ಲಕ್ಷ ತಿರುಪತಿ ಲಡ್ಡು ಮಾರಾಟ

| Published : Sep 25 2024, 12:56 AM IST

ಸಾರಾಂಶ

ಹಿಂದಿನ ಮುಖ್ಯಮಂತ್ರಿ ಜಗನ್‌ ಅವಧಿಯಲ್ಲಿ ತಿರುಪತಿ ಶ್ರೀವಾರಿ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಲಾಗಿತ್ತು ಎಂಬ ವಿವಾದದ ಹೊರತಾಗಿಯೂ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ.

ತಿರುಪತಿ: ಹಿಂದಿನ ಮುಖ್ಯಮಂತ್ರಿ ಜಗನ್‌ ಅವಧಿಯಲ್ಲಿ ತಿರುಪತಿ ಶ್ರೀವಾರಿ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಲಾಗಿತ್ತು ಎಂಬ ವಿವಾದದ ಹೊರತಾಗಿಯೂ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಹಿಂದಿನ ಸರ್ಕಾರದ ಮೇಲೆ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ ನಂತರದ 4 ದಿನದಲ್ಲಿ 14 ಲಕ್ಷ ಲಡ್ಡು ಮಾರಾಟವಾಗಿದೆ.

ಕಲಬೆರಕೆ ತುಪ್ಪ ಬಳಕೆ ಆರೋಪದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ನಾಯ್ಡು, ‘ನಾವು ಇದೀಗ ಕರ್ನಾಟಕದ ಶುದ್ಧ ನಂದಿನಿ ತುಪ್ಪ ಬಳಸುತ್ತಿದ್ದೇವೆ’ ಎಂದಿದ್ದರು. ಇದು ಭಕ್ತರ ಮೇಲೆ ಪರಿಣಾಮ ಬೀರಿದಂತೆ ಕಂಡುಬಂದಿದೆ.

ಪ್ರತಿ ನಿತ್ಯ ದೇಗುಲಕ್ಕೆ ಇದೀಗ ಸುಮಾರು 60 ಸಾವಿರ ಭಕ್ತರು ಭೇಟಿ ನೀಡುತ್ತಿದ್ದಾರೆ. ನಿತ್ಯ ದೇಗುಲದಲ್ಲಿ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗುತ್ತದೆ. ಆರೋಪ ಮಾಡಿದ ಬೆನ್ನಲ್ಲೇ ಅಂದರೆ ಸೆ.19ರಂದು 3.59 ಲಕ್ಷ, ಸೆ.20ರಂದು 3.17 ಲಕ್ಷ, ಸೆ.21ರಂದು 3.67 ಲಕ್ಷ ಮತ್ತು ಸೆ.22ರಂದು 3.60 ಲಕ್ಷ ಲಡ್ಡು ಮಾರಾಟವಾಗಿದೆ. ಇದು ನಿತ್ಯದ ಸರಾಸರಿ ಮಾರಾಟದ ಪ್ರಮಾಣದವಾದ 3.50 ಲಕ್ಷದ ಸಮೀಪದಲ್ಲೇ ಇದೆ.

‘ವಿವಾದ ಹಳೆಯ ವಿಷಯ. ಬಾಲಾಜಿ ಮೇಲಿನ ನಮ್ಮ ಅಚಲ ಭಕ್ತಿಯನ್ನು ಯಾರಾ ಅಲ್ಲಾಡಿಸಲಾಗದು’ ಎಂದು ಹಲವು ಭಕ್ತರು ಹೇಳಿದ್ದಾರೆ.