ಬಾಲಿವುಡ್‌ನ ತಾರಾ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ಹಳಸಿದೆ ಎಂಬ ವರದಿಗಳ ನಡುವೆಯೇ, ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಹೆಸರಿನೊಂದಿಗಿದ್ದ ಬಚ್ಚನ್‌ ಹೆಸರನ್ನು ಕೈಬಿಟ್ಟಿರುವುದು ಕುತೂಹಲ ಮೂಡಿಸಿದೆ.

ನವದೆಹಲಿ: ಬಾಲಿವುಡ್‌ನ ತಾರಾ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ಹಳಸಿದೆ ಎಂಬ ವರದಿಗಳ ನಡುವೆಯೇ, ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಹೆಸರಿನೊಂದಿಗಿದ್ದ ಬಚ್ಚನ್‌ ಹೆಸರನ್ನು ಕೈಬಿಟ್ಟಿರುವುದು ಕುತೂಹಲ ಮೂಡಿಸಿದೆ. ಐಶ್ವರ್ಯಾ ರೈ ದುಬೈನಲ್ಲಿ ನಡೆದ ಗ್ಲೋಬಲ್‌ ವುಮೆನ್ಸ್‌ ಪೋರಂನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಅವರು ಮಾತನಾಡುವಾಗ, ಪರದೆಯಲ್ಲಿ ಅವರ ಹೆಸರು ಐಶ್ವರ್ಯಾ ರೈ ಎಂದಷ್ಟೇ ಪ್ರದರ್ಶಿಸಲಾಗಿತ್ತು. ಅವರ ಮುಂದಿದ್ದ ಬಚ್ಚನ್ ಎನ್ನುವ ಉಪನಾಮವನ್ನು ಕೈಬಿಡಲಾಗಿತ್ತು.

ಪ್ರತ್ಯೇಕವಾದ 2 ವರ್ಷ ಬಳಿಕ ನಟ ಧನುಷ್‌, ರಜನಿ ಪುತ್ರಿ ಐಶ್ವರ್ಯಾಗೆ ವಿಚ್ಛೇದನ

ಚೆನ್ನೈ: ತಮಿಳು ನಟ ಹಾಗೂ ನಿರ್ದೇಶಕ ಧನುಷ್‌ ಮತ್ತು ಐಶ್ವರ್ಯಾ ರಜನಿಕಾಂತ್‌ ಅವರಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ನೀಡಿದೆ. ತಾವು ಒಂದಾಗಿ ಬಾಳುವ ಯಾವುದೇ ಸಾಧ್ಯತೆ ಇಲ್ಲ ಎಂದು ಎರಡೂ ಪಕ್ಷಗಳು ಕಳೆದ ವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಬುಧವಾರ ಡೈವೋರ್ಸ್‌ ನೀಡಿದೆ. ಧನುಷ್‌ ಹಾಗೂ ಐಶ್ವರ್ಯಾ 2004ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಮ್ಮ 18 ವರ್ಷದ ದಾಂಪತ್ಯ ಜೀವನನ್ನು ಅಂತ್ಯಗೊಳಿಸುತ್ತಿರುವುದಾಗಿ 2022 ಸೆಪ್ಟೆಂಬರ್‌ನಲ್ಲಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದರು.

ವಕ್ಫ್‌ ತಿದ್ದುಪಡಿ ಮಸೂದೆ ಕುರಿತ ಜೆಪಿಸಿ ಸಮಿತಿ ಅವಧಿ ವಿಸ್ತರಣೆಗೆ ಸಮ್ಮತಿ

ನವದೆಹಲಿ: ವಕ್ಪ್‌ ಕಾಯ್ದೆ ತಿದ್ದುಪಡಿ ಕುರಿತು ವರದಿ ನೀಡಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯ ಅವಧಿಯನ್ನು ಮುಂದಿನ ವರ್ಷದ ಬಜೆಟ್‌ ಅಧಿವೇಶನದ ಕೊನೆಯ ದಿನದ ವರೆಗೆ ವಿಸ್ತರಿಸಲು ಲೋಕಸಭೆ ಅನುಮೋದಿಸಿದೆ. ಈ ಕುರಿತು ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಸಲ್ಲಿಸಿದ ಮನವಿಯನ್ನು ಲೋಕಸಭೆ ಗುರುವಾರ ಧ್ವನಿಮತದ ಮೂಲಕ ಅಂಗೀಕರಿಸಿತು. ತಿದ್ದುಪಡಿ ಕುರಿತು ಇನ್ನೂ ಸಾಕಷ್ಟು ಸಲಹೆ, ಅಹವಾಲು ಸ್ವೀಕರಿಸಿಬೇಕಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಬೇಕೆಂದು ವಿಪಕ್ಷಗಳು ಪಟ್ಟುಹಿಡಿದಿದ್ದವು. ಮೊದಲಿಗೆ ಇದನ್ನು ನಿರಾಕರಿಸಿದ್ದ ಅಧ್ಯಕ್ಷ ಪಾಲ್‌, ಕೊನೆಗೆ ಅದಕ್ಕೆ ಸಮ್ಮತಿ ನೀಡಿದ್ದರು.

ಇಂದು ಕಾಂಗ್ರೆಸ್‌ ಸಿಡಬ್ಲ್ಯುಸಿ ಸಭೆ: 3 ರಾಜ್ಯಗಳ ಸೋಲು, ಸಂಸತ್‌ ರಣತಂತ್ರ ಚರ್ಚೆ

ನವದೆಹಲಿ: ಕಾಂಗ್ರೆಸ್‌ನ ಅತ್ಯುನ್ನತ ನೀತಿ ನಿರ್ಧಾರ ಮಂಡಳಿಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ನ.29ರ ಶುಕ್ರವಾರ ಇಲ್ಲಿ ಸಭೆ ಸೇರಲಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಇತ್ತೀಚಿನ ಹರ್ಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಘಾತಕಾರಿ ಸೋಲು, ಜಾರ್ಖಂಡ್‌ನಲ್ಲಿ ಸ್ಥಾನಗಳ ಸಂಖ್ಯೆ ಇಳಿಕೆ ಬಗ್ಗೆ ಚರ್ಚಿಸಲಾಗುವುದು. ಜೊತೆಗೆ ಮುಂದಿನ ವರ್ಷ ನಡೆಯಲಿರುವ ದೆಹಲಿ, ಬಿಹಾರ ವಿಧಾನಸಭೆ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಇದರ ಜೊತೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ಹಗರಣ, ಮಣಿಪುರ ಹಿಂಸಾಚಾರ ಮೊದಲ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿಹಾಕುವ ಕುರಿತ ರಣತಂತ್ರದ ಬಗ್ಗೆಯೂ ಚರ್ಚಿಸಲಾಗುವುದು ಎನ್ನಲಾಗಿದೆ.

ಅದಾನಿಯಿಂದ ಲಂಚ ಪಡೆದಿಲ್ಲ: ಜಗನ್‌ಗುಂಟೂರು: ಖ್ಯಾತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿರುವ ಸೌರ ವಿದ್ಯುತ್‌ ಖರೀದಿ ಪ್ರಕರಣದಲ್ಲಿ ತಮ್ಮ ಹೆಸರಿದೆ ಆರೋಪಗಳ ಬಗ್ಗೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಪ್ರತಿಕ್ರಿಯಿಸಿದ್ದು, ‘ನನ್ನ ಮೇಲಿನ ಆರೋಪ ಸುಳ್ಳು. ಅದಾನಿಯಿಂದ ಲಂಚ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕಂಪನಿ ಉತ್ಪಾದಿಸಿದ ಸೌರ ವಿದ್ಯುತ್‌ ಖರೀದಿ ಮಾಡಬೇಕು ಎಂದು ಆಂಧ್ರ ಸರ್ಕಾರದ ವಿದ್ಯುತ್‌ ಕಂಪನಿ ಮೇಲೆ ಅದಾನಿ ಸಮೂಹ ಒತ್ತಡ ಹೇರಿತ್ತು ಹಾಗೂ 1750 ಕೋಟಿ ರು. ಲಂಚ ನೀಡಿತ್ತು ಎಂದು ಅಮೆರಿಕ ಸರ್ಕಾರವು ಅಲ್ಲಿನ ಕೋರ್ಟಿನಲ್ಲಿ ಇತ್ತೀಚೆಗೆ ದಾವೆ ಹೂಡಿತ್ತು. ಬಳಿಕ ಆಂಧ್ರದಲ್ಲಿ, ‘ಈ ಲಂಚ ಸ್ವೀಕರಿಸಿದ್ದು ಜಗನ್‌. ಅವರಿಂದ ಆಂಧ್ರದ ಗೌಛರವಕ್ಕೆ ಧಕ್ಕೆಯಾಗಿದೆ’ ಎಂದು ಅವರ ವಿರೋಧಿ ರಾಜಕೀಯ ನಾಯಕರು ಆರೋಪ ಮಾಡಿದ್ದರು.

ಇದಕ್ಕೆ ಗುರುವಾರ ಜಗನ್‌ ಪ್ರತಿಕ್ರಿಯಿಸಿ, ‘ಇದು 2 ಕಂಪನಿಗಳ ನಡುವೆ ಒಪ್ಪಂದ. ಇದರಲ್ಲಿ ಮೂರನೇ ವ್ಯಕ್ತಿಗಳು ಮೂಗು ತೂರಿಸಿಲ್ಲ. ಆರೋಪದಲ್ಲಿ ನನ್ನ ಹೆಸರು ಎಲ್ಲೂ ಇಲ್ಲ. ಆದರೂ ಕೆಲವರು ಮೂರ್ಖತನದಿಂದ ಉದ್ದೇಶಪೂರ್ವಕವಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ಅದಾನಿಯನ್ನು ನನ್ನ ಅಧಿಕಾರಾವಧಿಯಲ್ಲಿ ಇತರ ಉದ್ಯಮಿಗಳ ರೀತಿ ಹಲವು ಬಾರಿ ಭೇಟಿ ಮಾಡಿದ್ದೆ. ಇದರಲ್ಲಿ ಏನೂ ವಿಶೇಷವಿಲ್ಲ’ ಎಂದು ಸ್ಪಷ್ಟಪಡಿಸಿದರು.ಅಲ್ಲದೆ, ‘ಈನಾಡು, ಆಂಧ್ರಜ್ಯೋತಿ ಹಾಗೂ ಟಿಡಿಪಿ ಪರ ಕೆಲಸ ಮಾಡುವ ಮಾಧ್ಯಮ ಸಂಸ್ಥೆಗಳು ನನ್ನ ವಿರುದ್ಧ ಸುಳ್ಳು ವರದಿ ಮಾಡುತ್ತಿವೆ. ಅವರಿಗೆ 48 ತಾಸಿನಲ್ಲಿ ಕ್ಷಮೆ ಕೇಳಲು ಮಾಹನಾನಿ ನೋಟಿಸ್‌ ನೀಡುವೆ. ಇಲ್ಲದಿದ್ದರೆ 100 ಕೋಟಿ ರು. ಮಾನಹಾನಿ ದಾವೆ ಹೂಡುವೆ’ ಎಂದು ಎಚ್ಚರಿಸಿದರು.