ಸಾಲು ಸಾಲು ರಜೆ ; ಮುಂಬೈ ರೈಲ್ವೆ ಸ್ಟೇಷನಲ್ಲಿ ಕಾಲ್ತುಳಿತ : 9 ಪ್ರಯಾಣಿಕರಿಗೆ ಗಾಯ

| Published : Oct 28 2024, 01:26 AM IST / Updated: Oct 28 2024, 04:20 AM IST

ಸಾರಾಂಶ

ಸಾಲು ಸಾಲು ಹಬ್ಬದ ರಜಾ ದಿನಗಳ ಹಿನ್ನೆಲೆ ಏಕಕಾಲಕ್ಕೆ ಸಾವಿರಾರು ಜನರು ಮುಂಬೈ ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.

ಮುಂಬೈ: ಸಾಲು ಸಾಲು ಹಬ್ಬದ ರಜಾ ದಿನಗಳ ಹಿನ್ನೆಲೆ ಏಕಕಾಲಕ್ಕೆ ಸಾವಿರಾರು ಜನರು ಮುಂಬೈ ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿದ ಘಟನೆ ಭಾನುವಾರ ನಡೆದಿದೆ. 

ಈ ಘಟನೆಯಲ್ಲಿ 9 ಜನರಿಗೆ ಗಾಯಗಳಾಗಿವೆ. ದೀಪಾವಳಿ ಮತ್ತು ಛಟ್‌ ಪೂಜೆ ಹಿನ್ನೆಲೆ ಬಾಂದ್ರಾ ರೈಲ್ವೆ ನಿಲ್ದಾಣದಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಹೊರಟಿದ್ದ ರೈಲು ನಿಲ್ದಾಣಕ್ಕೆ ಆಗಮಿಸಿ ನಿಲ್ಲುವ ಮೊದಲೇ ಹತ್ತಲು ಯತ್ನಿಸಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ನಡುವೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನೆ (ಉದ್ಧವ್‌ ಬಣ) ನಾಯಕ ಆದಿತ್ಯ ಠಾಕ್ರೆ, ಇದೊಂದು ನಾಚಿಕೆಗೇಡಿನ ವಿಷಯ. ಬಡ ಪ್ರಯಾಣಿಕರು ಸಂಕಷ್ಟದಲ್ಲಿದ್ದರೆ ರೈಲ್ವೆ ಸಚಿವರು ಬುಲೆಟ್‌ ರೈಲು ಯೋಜನೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರೊಬ್ಬ ಅಸಮರ್ಥ ಸಚಿವ ಎಂದು ಕಿಡಿಕಾರಿದ್ದಾರೆ.

ವರ್ಲಿಯಲ್ಲಿ ಆದಿತ್ಯ ಠಾಕ್ರೆ ವಿರುದ್ಧ ಮಿಲಿಂದ್ ದೇವ್ರಾಗೆ ಸೇನೆ ಟಿಕೆಟ್‌

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಶಿವಸೇನೆ (ಶಿಂಧೆ ಬಣ) ಭಾನುವಾರ ಸಂಜೆ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಸೇನೆಯ ಉದ್ಧವ್‌ ಬಣದ ಯುವ ನಾಯಕ ಆದಿತ್ಯ ಠಾಕ್ರೆ ಅವರ ವಿರುದ್ಧ ಸಂಸದ ಮಿಲಿಂದ್‌ ದೇವ್ರಾ ಅವರಿಗೆ ವರ್ಲಿ ಕ್ಷೇತ್ರದ ಟಿಕೆಟ್‌ ನೀಡಿದೆ. ಇದರಿಂದ ಕಣ ರಂಗೇರಲಿದೆ. ಇನ್ನು ಇತ್ತೀಚೆಗಷ್ಟೇ ಶಿವಸೇನೆ ಸೇರಿರುವ ಕುಡಾಲ್‌ ಕ್ಷೇತ್ರದಿಂದ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ನಿಲೇಶ್‌ ರಾಣೆ ಹಾಗೂ ಸಂಜಯ ನಿರುಪಂ ಅವರಿಗೆ ದಿಂಡೋರಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಕೂಡ 14 ಕ್ಷೇತ್ರಗಳ ಟಿಕೆಟ್‌ ಘೋಷಿಸಿದೆ.

ಹಿಂದೂ ಕ್ಯಾಂಟಿನ್‌ನಲ್ಲಿ ಗೋ ಹತ್ಯೆ ಬೆದರಿಕೆ: ಡಾಕಾ ವಿವಿ ವಿದ್ಯಾರ್ಥಿಗಳ ದುಷ್ಕೃತ್ಯ?

ಢಾಕಾ: ಶೇಖ್‌ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ಸರಣಿ ದೌರ್ಜನ್ಯಗಳ ನಡುವೆಯೇ, ಢಾಕಾ ವಿವಿಯ ಹಿಂದೂ ರೆಸ್ಟೋರೆಂಟ್‌ಗೆ ತೆರಳಿದ ವಿದ್ಯಾರ್ಥಿಗಳ ಗುಂಪೊಂದು ಅಲ್ಲೇ ಗೋಹತ್ಯೆ ಮಾಡುವ ಬೆದರಿಕೆ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. 

ವಿದ್ಯಾರ್ಥಿಗಳು ಹಸುವೊಂದನ್ನು ರೆಸ್ಟೋರೆಂಟ್‌ನೊಳಗೆ ತಂದು, ಮಾಲೀಕನ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಢಾಕಾ ವಿವಿಯದಲ್ಲಿನ ಮೊಡಾ ಕ್ಯಾಂಟಿನ್‌ ಹಿಂದೂ ವ್ಯಕ್ತಿಯೊಬ್ಬರಿಗೆ ಸೇರಿದ್ದು. ಹೀಗಾಗಿ ಅಲ್ಲಿ ಗೋಮಾಂಸ ಸೇವನೆಗೆ ಅವಕಾಶ ಇಲ್ಲ. ಇದನ್ನು ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿಗಳ ಗುಂಪೊಂದು, ಕ್ಯಾಂಪಸ್‌ನಲ್ಲಿ ಗೋಮಾಂಸ ಸೇವನೆಗೆ ಅವಕಾಶ ನೀಡಬೇಕು. ಇಲ್ಲದೇ ಹೋದಲ್ಲಿ ಕ್ಯಾಂಟಿನ್‌ನೊಳಗೆ ಹಸು ಕಡಿಯುವ ಬೆದರಿಕೆ ಹಾಕಿದ ಅಂಶಗಳು ವೈರಲ್‌ ಆಗಿರುವ ವಿಡಿಯೋದಲ್ಲಿದೆ.

ಅಪರೂಪಕ್ಕೆ ದೀಪಾವಳಿಗೆ ಶುಭ ಕೋರಿದ ಉಧಯನಿಧಿ : ಬಿಜೆಪಿ ನಾಯಕರ ವ್ಯಂಗ್ಯ

ಚೆನ್ನೈ: ಸನಾತನ ಹಿಂದೂ ಧರ್ಮ ಮಲೇರಿಯಾ, ಡೆಂಘೀ ಇದ್ದಂತೆ. ಅದರ ನಿರ್ಮೂಲನೆ ಅಗತ್ಯವಿದೆ ಎಂದು ಹೇಳಿದ್ದ ತಮಿಳುನಾಡಿನ ಸಚಿವ ಉಧಯನಿಧಿ ಇದೀಗ ದೀಪಾವಳಿಗೆ ಶುಭ ಕೋರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಯಾರೆಲ್ಲಾ ದೀಪಾವಳಿಯನ್ನು ಆಚರಿಸುತ್ತಾರೋ ಅವರಿಗೆಲ್ಲ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ. 

ಹಿಂದೂಗಳ ಹಬ್ಬಕ್ಕೆ ಉಧಯನಿಧಿ ಶುಭ ಹಾರೈಸುವ ತೀರಾ ಅಪರೂಪ. ಹೀಗಾಗಿಯೇ ‘ಎಂದೂ ಹಿಂದೂ ಹಬ್ಬಗಳಾದ ದೀಪಾವಳಿ, ವಿನಾಯಕ ಚತುರ್ಥಿಗೆ ಶುಭ ಕೋರದವರು ಇಂದು ಶುಭ ಕೋರುತ್ತಿದ್ದಾರೆ’ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.