ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಮಿತ್‌ ಶಾ ಪ್ರವೇಶ, ಸರಣಿ ಸಭೆ

| Published : Nov 18 2024, 12:01 AM IST / Updated: Nov 18 2024, 06:32 AM IST

Amith Shah

ಸಾರಾಂಶ

ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭ ಆಗುತ್ತಿದ್ದಂತೆಯೇ, ಇದನ್ನು ತಣಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರವೇಶಿಸಿದ್ದಾರೆ.

 ನವದೆಹಲಿ : ಜನಾಂಗೀಯ ಸಂಘರ್ಷಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭ ಆಗುತ್ತಿದ್ದಂತೆಯೇ, ಇದನ್ನು ತಣಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರವೇಶಿಸಿದ್ದಾರೆ. ಭಾನುವಾರ ಮಹಾರಾಷ್ಟ್ರದಲ್ಲಿ ನಡೆಸಬೇಕಿದ್ದ ಚುನಾವಣಾ ರ್‍ಯಾಲಿಗಳನ್ನು ಅವರು ರದ್ದುಗೊಳಿಸಿ ದೆಹಲಿಗೆ ಮರಳಿದ್ದಾರೆ. ಇದರ ಬೆನ್ನಲ್ಲೇ ಮಣಿಪುರದ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ ಅವರು ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ಮಣಿಪುರದಲ್ಲಿ ಶಾಂತಿ ಮರಳಿಸಲು ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ, ಅಸ್ಥಿರ ಪರಿಸ್ಥಿತಿ ಮರುಕಳಿಸಿದ ಕಾರಣ ಭಾನುವಾರ ಬೆಳಗ್ಗೆ ಅವರು ತಮ್ಮ ಮಹಾರಾಷ್ಟ್ರ ಪ್ರಚಾರವನ್ನು ರದ್ದುಗೊಳಿಸಿದರು ಹಾಗೂ ಮುಂಬೈನಿಂದ ದಿಲ್ಲಿಗೆ ಮರಳಿದರು. ಬಳಿಕ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಸತತ ಸಭೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಇದಲ್ಲದೆ, ಇನ್ನಷ್ಟು ಮಹತ್ವದ ಕ್ರಮಗಳನ್ನು ಕೇಂದ್ರ ಸರ್ಕಾರ ಜರುಗಿಸಲಿದ್ದು, ಈ ಬಗ್ಗೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಶಾ ಇನ್ನೊಂದು ಸಭೆ ಕರೆದಿದ್ದಾರೆ ಎಂದು ಅವು ಹೇಳಿವೆ.

ಕುಕಿ/ಹ್ಮಾರ್ ಮಿಜೋ ಉಗ್ರರಿಂದ ಅಪಹರಣಗೊಂಡಿದ್ದ 6 ಮೈತೇಯಿ ಜನಾಂಗದವರ ಶವ ಶನಿವಾರ ಪತ್ತೆ ಆಗುತ್ತಿದ್ದಂತೆಯೇ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿತ್ತು. ಶನಿವಾರ ರಾತ್ರಿ ಉದ್ರಿಕ್ತರ ಗುಂಪು ಮತ್ತೆ ಸಿಎಂ, ಇಬ್ಬರು ಸಚಿವರು ಹಾಗೂ ಮೂವರು ಬಿಜೆಪಿ ಶಾಸಕರ ನಿವಾಸದ ಮೇಲೆ ದಾಳಿ ಮಾಡಿತ್ತು. ಭಾನುವಾರ ಬೆಳಿಗ್ಗೆ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಶಾಂತ ಸ್ಥಿತಿ ಇದ್ದರೂ ಬಿಗುವಿನ ವಾತಾವರಣ ಇತ್ತು.

ರಾಜ್ಯದಲ್ಲಿ ಕಳೆದ ವರ್ಷದಿಂದ ಆರಂಭ ಆಗಿರುವ ಕುಕಿ-ಮೈತೇಯಿ ಜನಾಂಗಗಳ ನಡುವಿನ ಘರ್ಷಣೆ ಈವರೆಗೂ 300 ಜನರ ಬಲಿ ಪಡೆದಿದೆ.